

ಚಿದಾನಂದಮೂರ್ತಿ ಅವರ ಮೇಲೆ ತುಂಬ ಪ್ರಭಾವ ಬೀರಿದವರಲ್ಲಿ ತೀ.ನಂ. ಶ್ರೀಕಂಠಯ್ಯ ಪ್ರಮುಖರು. ‘ಅಂದಿನ ಶ್ರೇಷ್ಠ ವಿದ್ವಾಂಸರಾಗಿದ್ದ ಅವರು ತಮ್ಮ ವಿದ್ಯಾರ್ಥಿಯನ್ನು ಒಬ್ಬ ಸಂಶೋಧಕನನ್ನಾಗಿ ರೂಪುಗೊಳಿಸುವ ಬಗೆಯನ್ನು ಬಲ್ಲವರಾಗಿದ್ದರು. ಶ್ರಮಪಟ್ಟು ಕೆಲಸ ಮಾಡುವಲ್ಲಿ ಅವರೆಂದೂ ರಿಯಾಯ್ತಿ ತೋರಿಸಲಿಲ್ಲ; ಸಂದರ್ಭ ಬಿದ್ದಾಗ ಪ್ರಶಂಸಿಸದೆ ಇರುತ್ತಿರಲಿಲ್ಲ.
ಅವರೂ ಅವರ ಕುಟುಂಬವರ್ಗವೂ ನನ್ನನ್ನು ನೋಡಿಕೊಂಡ ರೀತಿಯನ್ನು ಸ್ಮರಿಸಿದಾಗ ಕಣ್ಣಲ್ಲಿ ನೀರು ಬರುತ್ತದೆ’ ಎಂದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದರು. ತೀನಂಶ್ರೀ, ಚಿಮೂ ಅವರನ್ನು ‘ಜ್ಞಾನಪುತ್ರ’ ಎಂದೇ ಭಾವಿಸಿದ್ದರಂತೆ. ಚಿಮೂ ಅವರಿಗೆ ಪಿಎಚ್.ಡಿ. ಪದವಿ ಪ್ರದಾನವಾದ ದಿನ ತೀನಂಶ್ರೀ ‘ನಾನಿನ್ನು ಬಂಜೆ ಅಲ್ಲ’ ಎಂದು ಉದ್ಗರಿಸಿದ್ದರಂತೆ! ತೀನಂಶ್ರೀ ಅವರು ಚಿದಾನಂದಮೂರ್ತಿ ಅವರನ್ನು ಕನ್ನಡ ಭಾಷಾ ಸಾಹಿತ್ಯಗಳ ನೈಷ್ಠಿಕ ವಿದ್ಯಾರ್ಥಿ ಎಂದು ಮೆಚ್ಚಿದ್ದಾರೆ. ಅದರ ಸಮರ್ಥನೆ ಎಂಬಂತೆ ಚಿಮೂ ಕನ್ನಡ ಸಾಹಿತ್ಯ ಚರಿತ್ರೆಯ ಕ್ಷೇತ್ರದಲ್ಲಿ ವಿಫುಲವಾಗಿ ಕೆಲಸ ಮಾಡಿದ್ದಾರೆ. ಕವಿರಾಜಮಾರ್ಗ ಕಾಲದ ಕನ್ನಡ ಸಾಹಿತ್ಯದಿಂದ ಹಿಡಿದು ಮುದ್ದಣ್ಣನವರೆಗೆ ಅವರ ಬರವಣಿಗೆ ವ್ಯಾಪಿಸಿದೆ. ಚಿಮೂ ಜಾನಪದ ಕ್ಷೇತ್ರದಲ್ಲೂ ಕೆಲಸ ಮಾಡಿದ್ದರು. ಗ್ರಾಮೀಣ ಹಾಗೂ ಪಗರಣ ಮತ್ತು ಇತರ ಸಂಪ್ರಯದಾಯಗಳು ಎಂಬ ಎರಡು ಪುಸ್ತಕಗಳಲ್ಲಿ ಅವರ ಈ ಸಂಬಂಧವಾದ ಸಂಪ್ರಬಂಧಗಳು ಸಂಗ್ರಹಗೊಂಡಿವೆ. ಜಾನಪದ ವಿಜ್ಞಾನದ ದೃಷ್ಟಿಯಿಂದ ಈ ಲೇಖನಗಳು ಮಹತ್ವಪೂರ್ಣವಾಗಿವೆ.