"ಕೊಹ್ಲಿ, ಎಬಿಡಿ ಕರೆ ಮಾಡಿದ್ರು"! ಹಳ್ಳಿ ಹುಡುಗರ ವಿರುದ್ಧ RCB ಕ್ಯಾಪ್ಟನ್​ ದೂರು​, ಏನಿದು ವಿಚಿತ್ರ ಘಟನೆ? | Chhattisgarh Boy

ವಿಜಯವಾಣಿ (52)
Published on

Chhattisgarh Boy: ಛತ್ತೀಸಗಢದ ಒಂದು ಹಳ್ಳಿಯ ದಿನಸಿ ಅಂಗಡಿಯಲ್ಲಿ ಕುಳಿತಿದ್ದ ಹುಡುಗನಿಗೆ ದಿಗ್ಗಜ ಕ್ರಿಕೆಟಿಗ ವಿರಾಟ್​ ಕೊಹ್ಲಿ, ಎಬಿಡಿ ವಿಲೀಯರ್ಸ್ ಮತ್ತು ಆರ್​ಸಿಬಿ ಕ್ಯಾಪ್ಟನ್ ರಜತ್ ಪಟೀದಾರ್​ಅವರಿಂದ ಫೋನ್​ ಕರೆ ಬಂದಿರುವುದು ಇದೀಗ ಪೊಲೀಸರು ಮತ್ತು ಸ್ಥಳೀಯರನ್ನು ಅಚ್ಚರಿಗೊಳಿಸಿದೆ. ಸ್ವತಃ ಆ ಹುಡುಗರನ್ನೇ ಗೊಂದಲಕ್ಕೆ ದೂಡಿದೆ. ಈ ಪ್ರಕರಣ ಸ್ಥಳೀಯ ಪೊಲೀಸರ ಎಂಟ್ರಿಯಿಂದ ಬಗೆಹರಿದಿದೆ ಮತ್ತು ಸ್ಪಷ್ಟವಾಗಿದೆ. ಅಷ್ಟಕ್ಕೂ ಏನಿದು ವಿಚಿತ್ರ ಕೇಸ್​ ಎಂಬ ಗೊಂದಲ ಈಗ ನಿಮ್ಮಲ್ಲಿ ಕಾಡುತ್ತಿರುವುದರಲ್ಲಿ ಅನುಮಾನವೇ ಬೇಡ.

ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ದೇವ್‌ಭೋಗ್ ಎಂಬ ಹಳ್ಳಿಯಲ್ಲಿ ಈ ಘಟನೆ ವರದಿಯಾಗಿದೆ. ಮಡಗಾಂವ್ ನಿವಾಸಿಗಳಾದ ಮನೀಶ್​ ಬಿಸಿ ಮತ್ತು ಕೇಮರಾಜ್ ಎಂಬ​ ಇಬ್ಬರು ಹುಡುಗರು, ಅಪ್ಪಟ್ಟ ಕ್ರಿಕೆಟ್​ ಅಭಿಮಾನಿಗಳು. ಇತ್ತೀಚೆಗಷ್ಟೇ ಇವರಲ್ಲಿ ಒಬ್ಬರು ಹೊಸದಾಗಿ ಮೊಬೈಲ್ ಅಂಗಡಿಯಿಂದ ಜೂ.28ಕ್ಕೆ ಜಿಯೋ ಸಿಮ್​ ಖರೀದಿಸಿದರು. ಈ ನಂಬರ್​ ಅನ್ನು ಆಕ್ಟಿವ್​ ಮಾಡಿಕೊಂಡ ಬಳಿಕ ವಾಟ್ಸಾಪ್​ ಖಾತೆ ತೆರೆದಿದ್ದಾರೆ. ಇಲ್ಲೇ ಅವರಿಗೆ ಅಚ್ಚರಿ ಕಾದಿದ್ದು. ವಾಟ್ಸಾಪ್​ ಡಿಪಿಯಲ್ಲಿ ಆರ್​ಸಿಬಿ ಕ್ಯಾಪ್ಟನ್ ರಜತ್ ಪಟೀದಾರ್​ ಫೋಟೋ ಇರುವುದು ಕಂಡು ಒಂದು ನಿಮಿಷ ಆಶ್ಚರ್ಯಚಕಿತರಾಗಿದ್ದರು. ಆದರೆ, ಹೀಗೆಲ್ಲ ಇರಬಹುದೇನೋ ಎಂದು ಸುಮ್ಮನಾಗಿ ಸಿಮ್ ಉಪಯೋಗಿಸುತ್ತಿದ್ದರು.

ಆದರೆ, ದಿನ ಕಳೆದಂತೆ ತಮ್ಮ ಸ್ನೇಹಿತರು, ಕುಟುಂಬಸ್ಥರು ಮತ್ತು ನೆರೆಹೊರೆಯವರಿಂದ ಬರಬೇಕಾ ದೂರವಾಣಿ ಕರೆಗಳ ಬದಲಿಗೆ ಸ್ಟಾರ್ ಕ್ರಿಕೆಟಿಗರಾದ ಎಬಿಡಿ ವಿಲೀಯರ್ಸ್​, ವಿರಾಟ್ ಕೊಹ್ಲಿ ಎಂಬ ಹೆಸರಿನಲ್ಲಿ ಫೋನ್​ಗಳು ಬರಲು ಶುರುವಾಯಿತು. ಇದರಿಂದ ಗಾಬರಿಗೊಂಡ ಇಬ್ಬರು, ಯಾರೋ ನಮಗೆ ಚಳ್ಳೆ ಹಣ್ಣು ತಿನಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮನ್ನು ಯಾಮಾರಿಸುವ ಪ್ರಯತ್ನದಲ್ಲಿದ್ದಾರೆ. ನಾವೂ ಅವರಂತೆಯೇ ಸುಳ್ಳು ಹೇಳೋಣ ಎಂದು ಮಾತನಾಡಿದವರಿಗೆಲ್ಲ 'ನಾನು ಎಂ.ಎಸ್​. ಧೋನಿ' ಎಂದು ಕಿಚಾಯಿಸಲು ಪ್ರಾರಂಭಿಸಿದ್ದರು.

ಯಾವುದೇ ಕಾಲ್​ ಬಂದರೂ ನಾನು ಮಹೇಂದ್ರ ಸಿಂಗ್ ಧೋನಿ ಮಾತಾಡ್ತಿರೋದು ಎಂದು ಕಾಲೆಳೆಯುತ್ತಿದ್ದರು. ಇನ್ನು ಜು.15ರಂದು ಮನೀಶ್​ಗೆ ಕರೆ ಮಾಡಿದ ಕ್ರಿಕೆಟಿಗ ರಜತ್ ಪಟೀದಾರ್​, "ಬಾಯ್​ ನಾನು ರಜತ್ ಮಾತಾಡ್ತಿರೋದು. ಇದು ನನ್ನ ವೈಯಕ್ತಿಕ ಫೋನ್ ನಂಬರ್​. ದಯವಿಟ್ಟು ಇದನ್ನು ಹಿಂತಿರುಗಿಸಿ" ಎಂದು ಸರಳವಾಗಿ ಕೋರಿದ್ದಾರೆ. ಅದರೆ, ಇದು ಕೂಡ ಸುಳ್ಳು ಎಂದು ಭಾವಿಸಿದ ಹುಡುಗರು, "ನಾನು ಧೋನಿ ಮಾತಾಡ್ತಿರೋದು" ಎಂದಿದ್ದಾರೆ.

'ಇದು ನನ್ನ ನಂಬರ್. ನನ್ನ ಫ್ಯಾಮಿಲಿ, ಫ್ರೆಂಡ್ಸ್​ ಮತ್ತು ಕ್ರಿಕೆಟ್​ ವಲಯದೊಂದಿಗೆ ಮಾತುಕತೆ ನಡೆಸಲು ಈ ಸಿಮ್​ನ ಅವಶ್ಯಕತೆಯಿದೆ. ದಯವಿಟ್ಟು ನನಗೆ ಹಿಂತಿರುಗಿಸಿ' ಎಂದು ಮತ್ತೊಮ್ಮೆ ನಯವಾಗಿ ಮನವಿ ಮಾಡಿದ್ದಾರೆ. ಇದ್ಯಾವುದಕ್ಕೂ ಬಗ್ಗದ ಹುಡುಗರ ತಮಾಷೆಗೆ ಬೇಸತ್ತ ರಜತ್​, ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಫೋನ್ ಮಾಡಿ, ದೂರು ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಹುಡುಗರ ಮನೆಗೆ ಬಂದ ಖಾಕಿ, ನೀವು ಮಾತಾಡ್ತಿರೋದು ನಿಜವಾದ ರಜತ್ ಪಟೀದಾರ್ ಎಂದು ವಿವರಿಸಿ, ಸಿಮ್​ ಹಿಂತಿರುಗಿಸುವ ವ್ಯವಸ್ಥೆ ಮಾಡಿದ್ದಾರೆ.

ಈ ಕುರಿತು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹುಡುಗರು, "ಈ ವಿಷಯ ನಿಜಕ್ಕೂ ನಮಗೆ ಆಶ್ಚರ್ಯ ತಂದಿದೆ. ನಾವು ಯಾರೋ ನಮ್ಮನ್ನು ಕ್ರಿಕೆಟಿಗರ ಹೆಸರಿನಲ್ಲಿ ಕಾಲೆಳೆಯುತ್ತಿದ್ದಾರೆ ಎಂದು ಧೋನಿ ಹೆಸರೇಳಿ ಮಾತಾಡ್ತಿದ್ದೆವು. ಆದರೀಗ, ಪೊಲೀಸರು ಹೇಳಿದ ಸಂಗತಿ ತಿಳಿದು ಸುಮ್ಮನಾದೆವು. ನಮ್ಮ ಜೀವನದಲ್ಲಿ ವಿರಾಟ್​ ಕೊಹ್ಲಿ ಜತೆ ಮಾತಾಡಬೇಕು, ನೋಡಬೇಕು ಎಂಬ ಮಹಾದಾಸೆಯಿತ್ತು. ಈಗ ಆ ಕನಸು ಮಾತಾಡುವ ಮೂಲಕ ಈಡೇರಿದೆ. ಕೊಹ್ಲಿ ಅವರ ಧ್ವನಿ ನಾವು ಕೇಳಿಸಿಕೊಂಡೆವು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net