ಬೆಂಗಳೂರು-ಬೆಳಗಾವಿ ಸೇರಿ 3 ವಂದೇ ಭಾರತ್​ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ! PM Modi in Bengaluru

PM Modi in Bengaluru
Published on

PM Modi in Bengaluru: ಇಂದು (ಆಗಸ್ಟ್​ 10) ಕರ್ನಾಟಕ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಹಾಗೂ ಬೆಳಗಾವಿ ನಡುವಿನ ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಚಾಲನೆ ನೀಡಿದರು. ಸುಮಾರು 15 ತಿಂಗಳುಗಳ ನಂತರ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಬೆಳಗ್ಗೆ 10.30ರ ಸುಮಾರಿಗೆ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ಕಾರಿನ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​ಆರ್)​ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಬೆಂಗಳೂರು- ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿದರು. ಹಸಿರು ಬಾವುಟ ಹಾರಿಸುವ ಮೂಲಕ ರೈಲು ಪ್ರಯಾಣಕ್ಕೆ ಚಾಲನೆ ನೀಡಿದರು.

ಇದೇ ವೇಳೆ ವರ್ಚುವಲ್​ ಆಗಿ ಅಮೃತ್​ಸರ್​- ಶ್ರೀ ಮತಾ ವೈಷ್ಣೋದೇವಿ ಕತ್ರಿ ಹಾಗೂ ಅಜ್ನಿ (ನಾಗಪುರ್​)- ಪುಣೆಯ ಮತ್ತೆರಡು ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೂ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು. ಈ ವೇಳೆ ರಾಜ್ಯಪಾಲ ತಾವರಚಂದ್​ ಗೆಹ್ಲೋಟ್​, ಸಿಎಂ ಸಿದ್ದರಾಮಯ್ಯ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಮತ್ತು ಕೇಂದ್ರ ರೈಲ್ವೆ ಸಚಿವಾಲಯದ ರಾಜ್ಯ ಸಚಿವ ವಿ. ಸೋಮಣ್ಣ ಉಪಸ್ಥಿತರಿದ್ದರು.

ಇದೇ ವೇಳೆ ವಂದೇ ಭಾರತ್​ ರೈಲಿನ ಒಳಗೆ ಹೆಜ್ಜೆ ಹಾಕಿ, ಮಕ್ಕಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಇಡೀ ಕಾರ್ಯಕ್ರಮದ ವೇಳೆ ಕೆಎಸ್​ಆರ್​ ನಿಲ್ದಾಣದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ವಂದೇ ಭಾರತ್​ ರೈಲಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ, ಹಳದಿ ಮಾರ್ಗದ ಮೆಟ್ರೋ ರೈಲಿಗೆ ಚಾಲನೆ ನೀಡಲು ಜೆಪಿ ನಗರದತ್ತ ಸಾಗಿದರು.

ಭದ್ರತೆಗೆ 10 ಸಾವಿರ ಪೊಲೀಸರ ನಿಯೋಜನೆ

ಪ್ರಧಾನಿ ಆಗಮಿಸಿರುವ ಹಿನ್ನೆಲೆ ಭದ್ರತೆಗಾಗಿ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ನೇತೃತ್ವದಲ್ಲಿ 4 ಜಂಟಿ ಪೊಲೀಸ್ ಆಯುಕ್ತರು, 10ಕ್ಕೂ ಹೆಚ್ಚು ಉಪ ಪೊಲೀಸ್ ಆಯುಕ್ತರು, 50ಕ್ಕೂ ಹೆಚ್ಚು ಸಹಾಯಕ ಉಪ ಪೊಲೀಸ್ ಆಯುಕ್ತರು, 200ಕ್ಕೂ ಹೆಚ್ಚು ಇನ್ ಸ್ಪೆಕ್ಟರ್‌ಗಳು, 650ಕ್ಕೂ ಹೆಚ್ಚು ಸಬ್ ಇನ್‌ಸ್ಪೆಕ್ಟರ್, ಸಾವಿರಕ್ಕೂ ಹೆಚ್ಚು ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗಳು ಮತ್ತು ಇತರರು ಬಂದೋಬಸ್ತನ ಮೇಲ್ವಿಚರಣೆ ನಡೆಸುತ್ತಿದ್ದಾರೆ. ವಿಶೇಷವಾಗಿ ಜಯನಗರ ಮತ್ತು ಜೆ.ಪಿ. ನಗರದ ಬಳಿ 50ಕ್ಕೂ ಹೆಚ್ಚು ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಮೋದಿ ಅವರು ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದು, ಈ ಪ್ರಯಯಕ್ತ ಶನಿವಾರ ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಅಲ್ಲಿ ಭೇಟಿ ನೀಡಿ ಭದ್ರತಾ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಪೊಲೀಸ್ ವಾಹನಗಳು, ಅಂಬುಲೆನ್ಸ್‌ಗಳು ಮತ್ತು ಅಗ್ನಿಶಾಮಕ ದಳದ ವಾಹನಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮೆಟ್ರೋ ನಿಲ್ದಾಣ ಸುತ್ತಮುತ್ತ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net