ಎನ್‌ಕೌಂಟರ್‌ನಲ್ಲಿ 22 ನಕ್ಸಲರ ಹತ್ಯೆ; ಭದ್ರತಾ ಸಿಬ್ಬಂದಿಯೋರ್ವ ಬಲಿ | Naxals Killed

shopian-encounter
Published on

Naxals Killed| ಛತ್ತೀಸ್‌ಗಢದ ಬಿಜಾಪುರ-ಕಾಂಕೇರ್​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ (ಮಾ.20) ರಂದು ನಡೆಸಿದ ಎರಡು ಪ್ರತ್ಯೇಕ ಎನ್​ಕೌಂಟರ್​ನಲ್ಲಿ 22 ನಕ್ಸಲರನ್ನು ಹತ್ಯೆ ಮಾಡಲಾಗಿದ್ದು, ಕಾರ್ಯಚರಣೆ ವೇಳೆ ಒಬ್ಬ ಡಿಆರ್‌ಜಿಯ ಸಿಬ್ಬಂದಿ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬಿಜಾಪುರ ಮತ್ತು ದಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ಗಂಗಲೂರು ಪೊಲೀಸ್ ಠಾಣೆ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿದ್ದಾಗ ಗುಂಡಿನ ಚಕಮಕಿ ನಡೆಯಿತು. ಸ್ಥಳದಿಂದ 18 ನಕ್ಸಲರ ಮೃತದೇಹಗಳು ಮತ್ತು ಬಂದೂಕುಗಳು ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರಾಜ್ಯ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಘಟಕದ ಒಬ್ಬ ಸಿಬ್ಬಂದಿ ಕೂಡ ಈ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಇನ್ನೂ ಕೂಡ ಕಾರ್ಯಾಚರಣೆ ಮುಂದುವರೆದಿದೆ. ರಾಜ್ಯದ ಕಾಂಕೇರ್ ಜಿಲ್ಲೆಯಲ್ಲಿ ಇತರ ನಾಲ್ವರು ನಕ್ಸಲರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದಿದ್ದಾರೆ.

ಬಿಜಾಪುರದ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ 31 ನಕ್ಸಲರು ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ ಒಂದು ತಿಂಗಳ ನಂತರ ಈ ಕಾರ್ಯಾಚರಣೆ ನಡೆದಿದೆ.

ಎನ್‌ಕೌಂಟರ್ ಸ್ಥಳದಿಂದ ಎಕೆ 47, ಎಸ್‌ಎಲ್‌ಆರ್‌ನಂತಹ ದೊಡ್ಡ ಸ್ವಯಂಚಾಲಿತ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲೈಟ್ ಕಮಾಂಡರ್ ಪಾಪ ರಾವ್ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದು, ಎನ್​ಕೌಂಟರ್​ ಸಮಯದಲ್ಲಿ ಸೈನಿಕರು 40 ರಿಂದ 45 ನಕ್ಸಲರನ್ನು ಸುತ್ತುವರೆದಿದ್ದರು ಎನ್ನಲಾಗಿದೆ.

ಎನ್‌ಕೌಂಟರ್ ಸ್ಥಳದಿಂದ ಶಸ್ತ್ರಾಸ್ತ್ರಗಳ ವಶ

ಗೃಹ ಸಚಿವ ವಿಜಯ್ ಶರ್ಮಾ ಹೇಳಿದ್ದೇನು?

ಬಿಜಾಪುರದಲ್ಲಿ ನಕ್ಸಲರ ವಿರುದ್ಧ ತೆಗೆದುಕೊಂಡ ಕ್ರಮಗಳ ಕುರಿತು ಮಾತನಾಡಿದ ಗೃಹ ಸಚಿವ ವಿಜಯ್ ಶರ್ಮಾ, ಬಿಜಾಪುರದ ಗಂಗಲೂರಿನಲ್ಲಿ ಬೆಳಗ್ಗೆಯಿಂದ ಎನ್‌ಕೌಂಟರ್ ನಡೆಯುತ್ತಿದೆ ಎಂದು ಹೇಳಿದರು. ಗಂಗಲೂರಿನಲ್ಲಿ 22 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲರೊಂದಿಗಿನ ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಹುತಾತ್ಮರಾಗಿದ್ದಾರೆ. ಛತ್ತೀಸ್‌ಗಢದ ಇಡೀ ಸರ್ಕಾರ ಹುತಾತ್ಮ ಯೋಧನ ಕುಟುಂಬದೊಂದಿಗೆ ನಿಂತಿದೆ. ಸೈನಿಕರ ಬಲದಿಂದಾಗಿ, ಒಂದು ಪ್ರಮುಖ ಕಾರ್ಯಾಚರಣೆ ಯಶಸ್ವಿಯಾಗಿದೆ. ಬಿಜಾಪುರ ಅತಿ ಹೆಚ್ಚು ನಕ್ಸಲರಿರುವ ಪ್ರದೇಶವಾಗಿದೆ ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net