ಸೂಪರ್​​​ ಬೈಕ್​​​ ಡಿಕ್ಕಿಯ ರಭಸಕ್ಕೆ ಹಾರಿಬಿದ್ದು ಪ್ರಾಣ ಕಳೆದುಕೊಂಡ ಕರ್ತವ್ಯನಿರತ ಪೊಲೀಸ್​ ಅಧಿಕಾರಿ!

Police Officers
Published on

ಚೆನ್ನೈ: ಅತಿ ವೇಗವಾಗಿ ಬಂದ ಸೂಪರ್​ಬೈಕ್​ ಡಿಕ್ಕಿಯಾದ ಪರಿಣಾಮ ಕರ್ತವ್ಯನಿರತ ಪೊಲೀಸ್​ ಅಧಿಕಾರಿಯೊಬ್ಬರು ಸ್ಥಳದಲ್ಲೇ ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನ ಪೋರೂರು​ ಟೋಲ್​ಗೇಟ್​ ಬಳಿ ನಡೆದಿರುವುದಾಗಿ ಪೊಲೀಸ್​ ಅಧಿಕಾರಿಗಳು ಸೋಮವಾರ (ಆ.05) ಮಾಹಿತಿ ನೀಡಿದ್ದಾರೆ.

ಕುಮಾರನ್​ ಮೃತ ದುರ್ದೈವಿ. ಇವರು ಪೋರೂರು ಪೊಲೀಸ್​ ಠಾಣೆಯಲ್ಲಿ ಹೆಡ್​ ಕಾನ್ಸ್​ಟೆಬಲ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ತಾಂಬರಂ-ಮದುರವೊಯಲ್​ ಬೈಪಾಸ್​ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕುಮಾರನ್​ ಅವರು ಈ ಏರಿಯಾದಲ್ಲಿ ಗಸ್ತಿನಲ್ಲಿರುವಾಗ ಈ ದುರ್ಘಟನೆ ಸಂಭವಿಸಿದೆ.

ಇತ್ತೀಚೆಗಷ್ಟೇ ಕುಮಾರನ್​​ ಅವರು ಪೋರೂರು ಪೊಲೀಸ್ ಠಾಣೆಯ ಟ್ರಾಫಿಕ್ ವಿಭಾಗದಿಂದ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ವರ್ಗಾವಣೆಯಾಗಿದ್ದರು. ಅವರು ಯು-ಟರ್ನ್ ಮಾಡಲು ಪ್ರಯತ್ನಿಸುತ್ತಿದ್ದಾಗ ತಾಂಬರಂ ಕಡೆಯಿಂದ ಪೋರೂರು ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಕವಾಸಕಿ ನಿಂಜಾ ಝಡ್​ಎಕ್ಸ್​ ಬೈಕ್​ 53 ವರ್ಷದ ಕುಮಾರನ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕುಮಾರನ್​ ಸ್ಥಳದಲ್ಲಿಯೇ ದುರಂತ ಸಾವಿಗೀಡಾದರು.

ಡಿಕ್ಕಿಯ ರಭಸಕ್ಕೆ ಕುಮಾರನ್ ಅವರ ವಾಹನದ ಹಿಂದೆ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಸ್ವಲ್ಪ ದೂರಕ್ಕೆ ಕುಮಾರನ್​ ಅವರನ್ನು ಎಳೆದೊಯ್ದಿದೆ. ಕುಮಾರನ್ ಹಾಗೂ ಬೈಕ್ ಸವಾರ ಇಬ್ಬರೂ ವಾಹನದಿಂದ ಕೆಳಗೆ ಬಿದ್ದ ಪರಿಣಾಮ ಕುಮಾರನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಅಣ್ಣಾನಗರದ ನಿವಾಸಿ. ಆತನ ಹೆಸರು ಸತ್ಯ ಸಾಯಿರಾಮ್. ಈತ ಹೆಲ್ಮೆಟ್ ಧರಿಸಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆವಡಿ ಸಂಚಾರಿ ತನಿಖಾ ಠಾಣೆ ಪೊಲೀಸರು ಕುಮಾರಣ್ಣನ ಶವವನ್ನು ಹೊರತೆಗೆದು ಪೋರೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net