

ಚೆನ್ನೈ: ಇದು ಇಡೀ ತಮಿಳುನಾಡಿನಲ್ಲೇ ಅತ್ಯಂತ ಜನನಿಬಿಡ ಮತ್ತು ಜನಪ್ರಿಯ ಮಾರುಕಟ್ಟೆ. ಹಣ್ಣು ಮತ್ತು ತರಕಾರಿಗಳಿಗೆ ಇದು ಪ್ರಸಿದ್ಧ. ಈಗ ಇದ್ದಕ್ಕಿದ್ದಂತೆಯೇ ಜನರ ಮನಸ್ಸಿನಲ್ಲಿ ಇದರ ಬಗ್ಗೆ ಭಯ ಹುಟ್ಟಿಬಿಟ್ಟಿದೆ. ಇದರ ಹೆಸರು ಕೇಳುತ್ತಿದ್ದಂತೆಯೇ ಜನ ಆತಂಕಕ್ಕೀಡಾಗುತ್ತಾರೆ!
ಅದಕ್ಕೆ ಬಲವಾದ ಕಾರಣವೂ ಇದೆ. ಈ ಮಾರುಕಟ್ಟೆಯ ಹೆಸರು ಕೊಯಂಬೆಡು ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆ. ಕಳೆದ ಒಂದೇ ವಾರದಲ್ಲಿ ಇಲ್ಲಿ 320 ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ!
ಇದೊಂದು ರೀತಿಯಲ್ಲಿ ಈಗ ಕರೊನಾ ಕ್ಲಸ್ಟರ್ ಆಗಿಬಿಟ್ಟಿದೆ. ಅಷ್ಟೇ ಅಲ್ಲ, ಈ ಮಾರುಕಟ್ಟೆಯಿಂದ ತಮಿಳುನಾಡಿನ ಇತರ ಜಿಲ್ಲೆಗಳಿಗೂ ಸೋಂಕು ಹರಡಿ ಕಿತ್ತಳೆ ವಲಯದಲ್ಲಿದ್ದ 14 ಜಿಲ್ಲೆಗಳು ಈಗ ಕೆಂಪು ವಲಯವಾಗಿ ಪರಿವರ್ತನೆಯಾಗಿವೆ. ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಏಳು ಸಾವಿರ ಜನರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಇವರ ಸಂಬಂಧಿಗಳನ್ನು ಇದುವರೆಗೆ ಪರೀಕ್ಷೆಗೆ ಒಳಪಡಿಸಿಲ್ಲ. ಅವರನ್ನೂ ಪರೀಕ್ಷೆಗೆ ಒಳಪಡಿಸಿದರೆ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಬಹುದು.
ಈ ಮಾರುಕಟ್ಟೆಯಲ್ಲಿ ಸುಮಾರು ಮೂರು ಸಾವಿರ ಅಂಗಡಿಗಳಿವೆ. ಪ್ರತಿ ಅಂಗಡಿಯಲ್ಲೂ ಮಾಲೀಕ ಮತ್ತು ಕನಿಷ್ಠ ಇಬ್ಬರು ಸಹಾಯಕರು ಇರುತ್ತಾರೆ. ರಾತ್ರಿ ಕೂಡ ಇಲ್ಲಿ ವಹಿವಾಟು ನಡೆಯುತ್ತದೆ. ಅನೇಕ ಕೆಲಸಗಾರರು ಅಲ್ಲೇ ನಿದ್ರಿಸುತ್ತಾರೆ. ಹೀಗಾಗಿ ಸೋಂಕು ಹರಡುವಿಕೆ ಇಲ್ಲಿ ಹೆಚ್ಚು.
ದೆಹಲಿ ಹಜರತ್ ನಿಜಾಮುದ್ದೀನ್ ತಬ್ಲಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ದೂರವಾಣಿ ಸಂಖ್ಯೆಯಾದರೂ ಇತ್ತು. ಇದರಿಂದ ಅವರ ಹುಟುಕಾಟಕ್ಕೆ ಒಂದು ದಿಕ್ಸೂಚಿ ಇತ್ತು. ಆದರೆ ಈ ಮಾರುಕಟ್ಟೆಯಲ್ಲಿನ ವರ್ತಕರು ಮತ್ತವರ ಸಹಾಯಕರನ್ನು ಮಾತ್ರ ಹುಡುಕಬಹುದಲ್ಲದೆ ಅವರ ಸಂಪರ್ಕಕ್ಕೆ ಬಂದವರು, ಕೂಲಿಯಾಳುಗಳು, ಟ್ರಕ್ ಚಾಲಕರು, ಕ್ಲೀನರ್ಗಳನ್ನು ಹೇಗೆ ಹುಡುಕುವುದು ಎಂಬುದೀಗ ಸ್ಥಳೀಯ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ಮಾರುಕಟ್ಟೆಗೆ ಭೇಟಿ ನೀಡಿದ್ದ ಕಡಲೂರು ಜಿಲ್ಲೆಯ 122 ಮಂದಿ, ವಿಲ್ಲುಪುರಂನ 82 ಮಂದಿಯಲ್ಲಿ ಕರೊನಾ ಪಾಸಿಟಿವ್ ಇದೆ. ಈ ಮಾರುಕಟ್ಟೆಗೆ ಭೇಟಿ ನೀಡಿದವರು ಮರಳಿದ ನಂತರ ದಿಂಡಿಗಲ್, ತೆಂಕಸಿ ಜಿಲ್ಲೆಗಳು ಕೆಂಪು ವಲಯಗಳಾಗಿವೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಚೆನ್ನೈನಿಂದ ಬರುವವರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಿಲ್ಲುಪುರಂ ಜಿಲ್ಲೆಯಲ್ಲಿ 459 ಜನರನ್ನು ಕ್ವಾರಂಟೈನ್ಗೆ ಕಳುಹಿಸಲಾಗಿದೆ. (ಏಜೆನ್ಸೀಸ್)