

ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ರೈಲು ಸಂಪರ್ಕ ಕಲ್ಪಿಸಲು ನಿರ್ವಿುಸಲಾಗಿರುವ ಚೆನಾಬ್ ಸೇತುವೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 6ರಂದು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಕಾತ್ರಾದಲ್ಲಿ 46 ಸಾವಿರ ಕೋಟಿ ರೂ. ವೆಚ್ಚದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸ ಲಿದ್ದು, ಕಾತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ.
43,780 ಕೋಟಿ ರೂ. ವೆಚ್ಚದಲ್ಲಿ 272 ಕಿ.ಮೀ. ಉದ್ದದ ಉಧಮ್ ಪುರ, ಶ್ರೀನಗರ, ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಅಡಿ ಜಮ್ಮು-ಕಾಶ್ಮೀರಕ್ಕೆ ಸರ್ವಋತು ಸಂಪರ್ಕ ಕಲ್ಪಿಸುವ ರೈಲು ಮಾರ್ಗ ನಿರ್ವಿುಸಲಾಗಿದೆ. ಈ ಮಾರ್ಗ 119 ಕಿ.ಮೀ. ಉದ್ದದ 36 ಸುರಂಗ ಮಾರ್ಗ, 943 ಸೇತುವೆಗಳನ್ನು ಒಳಗೊಂಡಿದ್ದು, ವರ್ಷದ ಎಲ್ಲ ಕಾಲದಲ್ಲಿಯೂ ಶ್ರೀನಗರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ ಚೆನಾಬ್ ನದಿಗೆ ನಿರ್ವಿುಸಿರುವ ಸೇತುವೆ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಸೇತುವೆಯ ವೈಶಿಷ್ಟ್ಯತೆ: ? ಎತ್ತರ ಮತ್ತು ರಚನೆ: ಸೇತುವೆ ನದಿಯಿಂದ 359 ಮೀಟರ್ (1178 ಅಡಿ) ಎತ್ತರದಲ್ಲಿ ನಿರ್ವಿುಸಲಾಗಿದೆ. ಇದು ಐಫೆಲ್ ಟವರ್ಗಿಂತ ಎತ್ತರವಿದ್ದು, ವಿಶ್ವದ ಅತ್ಯಂತ ಎತ್ತರ ರೈಲು ಸೇತುವೆಯಾಗಿದೆ. ಸೇತುವೆ ಒಟ್ಟು ಉದ್ದ 1315 ಮೀಟರ್ ಇದ್ದು, ಕಮಾನಿನ ಉದ್ದ 467 ಮೀ. ಇದೆ.
ಇಂಜಿನಿಯರಿಂಗ್ ವಿನ್ಯಾಸ: ಈ ಸೇತುವೆಯನ್ನು ರಿಕ್ಟರ್ ಮಾಪಕದಲ್ಲಿ 8 ತೀವ್ರತೆಯ ಭೂಕಂಪನ ತಡೆದುಕೊಳ್ಳುವಂತೆ, ಗಂಟೆಗೆ 266 ಕಿ.ಮೀ. ವೇಗದಲ್ಲಿ ಬೀಸುವ ಗಾಳಿ ಹೊಡೆತ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಡಿಆರ್ಡಿಒ ನೆರವಿನೊಂದಿಗೆ ಸ್ಫೋಟ ನಿರೋಧಕ ವಿನ್ಯಾಸ ಅಳವಡಿಸಲಾಗಿದ್ದು, ಇದು 40 ಕೆ.ಜಿ. ಟಿಎನ್ಟಿಗೆ ಸಮನಾದ ತೀವ್ರ ಸ್ಪೋಟವನ್ನೂ ತಡೆದುಕೊಳ್ಳುತ್ತದೆ.
ಆಯುಷ್ಯ: ಡಬಲ್ ಟ್ರ್ಯಾಕ್ನ ಇದು 120 ವರ್ಷ ಆಯುಷ್ಯ ಹೊಂದಿದ್ದು, ರೈಲು ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಂಚರಿಸಬಹುದು.
ವಿನ್ಯಾಸ: ಸೇತುವೆಯ ವೆಲ್ಡಿಂಗ್ ಗ್ರೂವ್ಗಳನ್ನು ಒಳಗೊಂಡಂತೆ ನಿಖರವಾದ 3ಡಿ ಮಾಡೆಲಿಂಗ್ಗಾಗಿ ಬಿಲ್ಡಿಂಗ್ ಇನ್ಪಮೇಶನ್ ಬಳಸಲಾಗಿದೆ ಮತ್ತು ಡೆನ್ಮಾರ್ಕ್ನ ಫೋರ್ಸ್ ಟೆಕ್ನಾಲಜಿಯಿಂದ ಗಾಳಿಯ ಟನಲ್ ಪರೀಕ್ಷೆ ನಡೆಸಿ ಸೇತುವೆ ಪ್ರತಿಕೂಲ ಹವಾಮಾನ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.
ವ್ಯೂಹಾತ್ಮಕ ಮಹತ್ವ: ಪಾಕ್ ಮತ್ತು ಚೀನಾ ಜತೆ ಗಡಿ ಹಂಚಿ ಕೊಂಡಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಸರ್ವಋತು ಸಂಪರ್ಕ ಕಲ್ಪಿಸುತ್ತದೆ. ಸರಕು ಸಾಗಣೆ, ಸೇನಾ ಓಡಾಟಕ್ಕೆ ಇದು ಮಹತ್ವದ್ದಾಗಿದೆ.
ಚೆನಾಬ್ ಸೇತುವೆ ಕಡಿದಾದ ಕಣಿವೆ ಪ್ರದೇಶದಲ್ಲಿ ನಿರ್ವಿುಸಲಾಗಿದೆ. ಇಲ್ಲಿಗೆ ರಸ್ತೆ, ವಿದ್ಯುತ್, ನೀರಿನ ಸಂಪರ್ಕ ಇರಲಿಲ್ಲ. ಇದರ ಹೊರತಾಗಿಯೂ 25 ಸಾವಿರ ಟನ್ ಸ್ಟೀಲ್, 6 ಲಕ್ಷ ಬೋಲ್ಟ್ ಗಳನ್ನು ಸ್ಥಳದಲ್ಲೇ ತಯಾರಿಸಿ ಬಳಸಲಾಗಿದೆ. ಸ್ಟೇಯ್್ಡ ಕ್ಯಾಂಟಿಲಿವರ್ ವಿಧಾನದಲ್ಲಿ ಕೇಬಲ್ ಕ್ರೇನ್ ವಿಧಾನದಲ್ಲಿ ಕಮಾನನ್ನು ನಿರ್ವಿುಸಲಾಗಿದೆ. ಸೇತುವೆ ನಿರ್ವಣಕ್ಕೆ 2002ರಲ್ಲಿ ಅನುಮೋದನೆ ದೊರೆತಿತ್ತು. ಆದರೆ 2017ರಲ್ಲಿ ಸೇತುವೆ ನಿರ್ಮಾಣ ಆರಂಭವಾಗಿತ್ತು. 2022ರ ಆಗಸ್ಟ್ನಲ್ಲಿ ನಿರ್ಮಾಣ ಪೂರ್ಣ ಗೊಂಡು 2023ರ ಮಾರ್ಚ್ನಲ್ಲಿ ರೈಲ್ವೆ ಟ್ರಾ್ಯಕ್ ಅಳವಡಿಕೆ ಪೂರ್ಣ ಆಗಿದೆ. ಪ್ರಾಯೋಗಿಕ ಸಂಚಾರದ ಬಳಿಕ ಉದ್ಘಾಟನೆಗೆ ಸಜ್ಜಾಗಿದೆ.