ಹಾಲಿನಲ್ಲಿ ರಾಸಾಯನಿಕ ಅಂಶ ಪತ್ತೆ!

milk
ಹಾಲು ಕಲಬೆರಕೆ ಕುರಿತು ಪರಿಶೀಲಿಸುತ್ತಿರುವ ಅಧಿಕಾರಿಗಳು.
Published on

ಕೋಲಾರ: ಜಿಲ್ಲೆಯ ಗಡಿ ಮುಳಬಾಗಿಲು ತಾಲೂಕು ವ್ಯಾಪ್ತಿಯಲ್ಲಿ ಹಾಲಿನಲ್ಲಿ ಕೆಮಿಕಲ್​ ಅಂಶ ಪತ್ತೆಯಾಗಿದೆ.

ಹೌದು, ಜಿಲ್ಲೆಯ ಮುಳಬಾಗಿಲು ತಾಲೂಕು ಸವಟೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನಡೆಸುತ್ತಿದ್ದ ಹಾಲಿನ ಘಟಕದ ಮೇಲೆ ಜೂನ್​ 1 ರಂದು ಆಹಾರ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ, ಹಾಲನ್ನು ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಿದ್ದರು. ಈ ಹಾಲಿನಲ್ಲಿ ರಾಸಾಯನಿಕ ಅಂಶ ಇರುವುದು ಪತ್ತೆಯಾಗಿದೆ. ಈ ಕೆಮಿಕಲ್​ ಮಿಶ್ರಿತ ಹಾಲು ಅಸುರಕ್ಷಿತ ಹಾಗೂ ಆರೋಗ್ಯಕ್ಕೆ ಹಾನಿಕರ ಎಂಬುದು ದೃಢಪಟ್ಟಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ:

ಸವಟೂರು ಖಾಸಗಿ ಡೇರಿಯಲ್ಲಿ ಹಾಲಿಗೆ ಕೆಮಿಕಲ್​ ಮಿಶ್ರಣ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಅದರಂತೆ ಮುಳಬಾಗಿಲು ಡಿವೈಎಸ್ಪಿ ನಂದಕುಮಾರ್​ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿ, ಕೆಮಿಕಲ್​ ಮತ್ತು ಸಂಬಂಧಿಸಿದ ಉಪಕರಣಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು.

ಅಧಿಕಾರಿಗಳು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ ಹಾಲಿನ ವರದಿ ಬಂದಿದ್ದು, ಇದು ಸೇವನೆ ಮಾಡಲು ಯೋಗ್ಯವಲ್ಲ ಎಂಬುದು ದೃಢಪಟ್ಟಿದೆ. ಹಾಗಾಗಿ ಬಿಎನ್​ಎಸ್​ ಹಾಗೂ ಆಹಾರ ಸುರಕ್ಷತಾ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ಬಿ.ನಿಖಿಲ್​ ತಿಳಿಸಿದರು.

ಪ್ರಮುಖ ಆರೋಪಿಯನ್ನು ಬಂಧಿಸಲು ಕ್ರಮವಹಿಸಲಾಗಿದೆ. ಕಲಬೆರಕೆ ಹಾಲನ್ನು ಆರೋಪಿ ಹೊರ ರಾಜ್ಯದ ಒಕ್ಕೂಟಕ್ಕೆ ರವಾನಿಸುತ್ತಿದ್ದ ಎನ್ನಲಾಗಿದೆ.

ಸಾರ್ವಜನಿಕರಲ್ಲಿ ಜಾಗೃತಿ:

ಕಲಬೆರಕೆ ಹಾಲನ್ನು ಉಪಯೋಗಿಸದಂತೆ ಹಾಗೂ ಖರೀದಿ ಮಾಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸಿದೆ. ಜಿಲ್ಲೆಯ ಬೇರೆ ಬೇರೆ ಜಾಗಗಳಲ್ಲಿ ಈ ದಂಧೆ ನಡೆಯುತ್ತಿರುವ ಮಾಹಿತಿ ಇದ್ದು, ಅತಿ ಶ್ರೀದಲ್ಲೇ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೂ ಚರ್ಚಿಸಿದ್ದು, ಆಹಾರ ಇಲಾಖೆಯೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net