

ಬೆಂಗಳೂರು: ಪೊಲೀಸರು ಆರೋಪಿಯನ್ನು ಠಾಣೆಗೆ ಕರೆಸಿಕೊಳ್ಳುವಾಗ ನೀಡುವ ನೋಟಿಸ್‌ನಲ್ಲಿ ಕ್ರೈಂ ನಂಬರ್, ಎಫ್‌ಐಆರ್ ಪ್ರತಿ, ಅಪರಾಧ ಏನು ಎಂಬ ಬಗೆಗಿನ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡ ಚೆಕ್‌ಲಿಸ್ಟ್ ಕಡ್ಡಾಯವಾಗಿ ಒದಗಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಡಿಜಿ- ಐಜಿಪಿ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಅಮೃತಹಳ್ಳಿ ಠಾಣೆಯ ಪೊಲೀಸ್ ಸಬ್ ಇನ್‌ಸ್ಟೆಕ್ಟರ್ ಮೊಬೈಲ್ ಫೋನ್‌ನಲ್ಲಿ ವಾಟ್ಸ್‌ಆ್ಯಪ್ ಮೂಲಕ, ‘ನಾಳೆ ನೀವು ಠಾಣೆಗೆ ಹಾಜರಾಗಬೇಕು’ ಎಂದು ಕಳುಹಿಸಿದ್ದ ಸಂದೇಶವನ್ನು ಪ್ರಶ್ನಿಸಿ ಪತ್ರಕರ್ತ ಟಿ.ಆರ್. ಶಿವಪ್ರಸಾದ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ- 2023ರ ಕಲಂ 35ರ ಅನುಸಾರ ಆರೋಪಿಗೆ ಚೆಕ್‌ಲಿಸ್ಟ್ ಒದಗಿಸದೆ ಹೋದಲ್ಲಿ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಅಂತೆಯೇ, ಪೊಲೀಸರು ಇಂತಹ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.