ಆರ್‌ಟಿಒ ಕಚೇರಿಯಲ್ಲೇ ಕುಳಿತು ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಗೆ ಲಕ್ಷಾಂತರ ರೂ. ಧೋಖಾ

rto
Published on

ಬೆಂಗಳೂರು: ಹರಿಯಾಣ ರಸ್ತೆ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿದ್ದ ಕಾರನ್ನು ರಾಜ್ಯಕ್ಕೆ ವರ್ಗಾವಣೆ ಮಾಡಿಕೊಳ್ಳಲು ಬಂದ ವ್ಯಕ್ತಿಗಳಿಂದ ಆರ್‌ಟಿಒ ಅಧಿಕಾರಿ ಸೋಗಿನಲ್ಲಿ ಹಣ ಪಡೆದು ವಂಚನೆ ಮಾಡಿದ್ದಾನೆ.

ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಮೀರಾ ಎಂಬಾಕೆ, ಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ನಕಲಿ ಆರ್‌ಟಿಒ ಅಧಿಕಾರಿ ಮೊಹಮ್ಮದ್ ಅಜಾರುದ್ದೀನ್ ಎಂಬಾತನ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹರಿಯಾಣದಲ್ಲಿ ನೋಂದಣಿಯಾಗಿದ್ದ ಕಾರನ್ನು ರಾಜ್ಯಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಮೀರಾ, ಜಯನಗರ ಆರ್‌ಟಿಒ ಕಚೇರಿಗೆ ಹೋದಾಗ ಕ್ಯಾಬಿನ್‌ನಲ್ಲಿ ಕುಳಿತಿದ್ದ ಮೊಹಮ್ಮದ್ ಅರ್ಜಿ ಸ್ವೀಕರಿಸಿದ್ದಾನೆ. ಕರ್ನಾಟಕಕ್ಕೆ ವರ್ಗಾವಣೆ ಮಾಡಿಕೊಡಲು 1.05 ಲಕ್ಷ ರೂ. ಖರ್ಚು ಆಗಲಿದೆ ಎಂದು ಹೇಳಿ ಜಯನಗರ ಆರ್‌ಟಿಒ ಹೆಸರಿನಲ್ಲಿ 94 ಸಾವಿರ ರೂ. ಡಿಡಿ ಪಡೆದು ವಾಹನದ ಅಸಲಿ ದಾಖಲೆ ಪಡೆದುಕೊಂಡಿದ್ದ.

ಬಳಿಕ ಹೆಚ್ಚುವರಿಯಾಗಿ 8,500 ರೂ. ನಗದು ಸ್ವೀಕರಿಸಿ ಬಳಿಕ 3 ಸಾವಿರ ರೂ. ಅನ್ನು ತನ್ನ ಪತ್ನಿಯ ವ್ಯಾಲೆಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಇದಾದ ಮೇಲೂ ಕಾರಿನ ದಾಖಲೆ ಮಾತ್ರ ವರ್ಗಾವಣೆ ಆಗಿರಲಿಲ್ಲ. 6 ತಿಂಗಳ ಕಾಲ ಸಬೂಬು ಹೇಳಿಕೊಂಡು ಕಾಲ ಮುಂದೂಡಿಕೊಂಡು ಬಂದಿದ್ದಾನೆ. ಕೊನೆಗೊಂದು ದಿನ ಮತ್ತೆ 60 ಸಾವಿರ ರೂ. ಕೊಟ್ಟರೇ ದಾಖಲೆ ವರ್ಗಾವಣೆ ಆಗಲಿದೆ ಎಂದುಬೇಡಿಕೆ ಒಡ್ಡಿದ್ದಾನೆ.

ನೊಂದ ಮೀರಾ, ಈ ಬಗ್ಗೆ ಜಯನಗರ ಆರ್‌ಟಿಒ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಅಧಿಕಾರಿಗಳು ಆತನನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದಾಗ ಸರ್ಕಾರಿ ಅಧಿಕಾರಿ ಎಂಬುದು ಗೊತ್ತಾಯಿತು. ಅಲ್ಲದೆ, ಅಧಿಕಾರಿಗಳ ಮುಂದೆ ಹಣ ವಾಪಸ್ ಕೊಡುವುದಾಗಿ ಒಪ್ಪಿಕೊಂಡು ಹೋಗಿದ್ದ. ಜೂನ್ 21ರಂದು 36 ಸಾವಿರ ರೂ. ಮಾತ್ರ ವಾಪಸ್ ಕೊಟ್ಟಿದ್ದಾನೆ. ಉಳಿಕೆ ಹಣ ಕೇಳಿದರೆ ಬೆದರಿಕೆ ಒಡ್ಡುತ್ತಿದ್ದಾನೆ.

ಆರ್‌ಟಿಒ ಕಚೇರಿ ಕ್ಯಾಬಿನ್‌ನಲ್ಲಿ ಕುಳಿತಿದ್ದ ಕಾರಣ ಸರ್ಕಾರಿ ಅಧಿಕಾರಿ ಎಂದು ನಂಬಿ ಅಜಾರುದ್ದೀನ್ ಕೈಗೆ ಹಣ ಮತ್ತು ಡಿಡಿಯನ್ನು ಒಪ್ಪಿಸಿದ್ದೇನೆ. ಆರೋಪಿಯ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದುದ ದೂರಿನಲ್ಲಿ ಮಹಿಳೆ, ಮನವಿ ಮಾಡಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಯನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net