

ಬೆಂಗಳೂರು: ರಾಜ್ಯದ ಜನರನ್ನು ಅತಿ ತೀವ್ರವಾಗಿ ಕಾಡುತ್ತಿರುವುದು ಬೆಲೆಗಳ ಏರಿಕೆ ಸಮಸ್ಯೆ. ಭಾಗ್ಯಗಳನ್ನು ಕೊಟ್ಟು ಜನರಿಗೆ ಏಮಾರಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ವಾಗ್ದಾಳಿ ಮಾಡಿದರು.
ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮಂಡ್ಯಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಿಸಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕರು ಪೈಪೋಟಿಯ ಮೇಲೆ ಮುಗಿ ಬಿದ್ದಿದ್ದರೂ ವಾಸ್ತವ ಏನೆಂಬುದು ಜನರಿಗೆ ಗೊತ್ತಿದೆ ಎಂದು ಕುಟುಕಿದರು.
ಚಿನ್ನ ಹಾಗೂ ತೈಲೋತ್ಪನ್ನ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿಸಿರುತ್ತದೆ. ಇಷ್ಟಕ್ಕೂ ಡೀಸೆಲ್, ಪೆಟ್ರೋಲ್ ಲೀಟರ್ ಗೆ ಎರಡು ರೂ ಅಬಕಾರಿ ಸುಂಕ ಏರಿಕೆಯನ್ನು ತೈಲ ಕಂಪನಿಗಳ ತುಂಬಿಕೊಡುತ್ತವೆ. ಇದು ಜನಸಾಮಾನ್ಯರ ಮೇಲೆ ಹೊರೆಯಾಗುವುದಿಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದನ್ನು ಕಾಂಗ್ರೆಸ್ ನಾಯಕರು ಮೊದಲಿಗೆ ಗಮನಿಸಬೇಕು ಎಂದು ತಿವಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಜೆ ಬೆಲೆ ಏರಿಕೆಯನ್ನು ಮಾಡುತ್ತಲಿದೆ. ಐದು ಗ್ಯಾರಂಟಿಗಳನ್ನು ಕೊಟ್ಟು ಜನರಿಗೆ ಆರ್ಥಿಕ ಶಕ್ತಿ ತುಂಬಿದ್ದೇವೆ ಎನ್ನುತ್ತಾ ಹಾಲು, ಡೀಸೆಲ್, ಪೆಟ್ರೋಲ್, ಮುದ್ರಾಂಕ ಶುಲ್ಜ ಮತ್ತಿತರು ತೆರಿಗೆಗಳನ್ನು ಹೆಚ್ಚಿಸಿದೆ. ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲದರ ಮೇಲೆ ಟ್ಯಾಕ್ಸ್ ಹಾಕಿದೆ ಎಂದು ಸುಮಲತಾ ಅಂಬರೀಷ್ ಖಂಡಿಸಿದರು.
ಜನರಿಗೆ ಧ್ವನಿಯಾಗಲು ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ. ಜನರಿಗೆ ಖರ್ಚು ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಮೇಲ್ನೋಟಕ್ಕೆ ಎರಡು ರೂ ಕೊಟ್ಟು 20 ರೂ ಕಸಿದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿಯಿಂದ ನಾನು ಅಂತರ ಕಾಯ್ದುಕೊಂಡಿಲ್ಲ. ಮನೆಗೆ ಮೊಮ್ಮಗ ಬಂದಿರುವುದರಿಂದ ಕುಟುಂಬಕ್ಕೆ ಸಮಯ ಕೊಡಲು ಒಂದು ಹೆಜ್ಜೆ ಹಿಂದಿಟ್ಟಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷ ಯಾರಾಗಬೇಕೆಂದು ವರಿಷ್ಠರು, ಹಿರಿಯರು ಸೇರಿ ತೀರ್ಮಾನ ಮಾಡುತ್ತಾರೆ ಎಂದರು.
ಮತ್ತೊಂದು ಪಕ್ಷದ ಜತೆಗೆ ಮೈತ್ರಿ ಯಾವತ್ತೂ ಸವಾಲಿನದಾಗಿರುತ್ತದೆ. ಒಂದೇ ಪಕ್ಷದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಇರುತ್ತವೆ. ಇದು ಎಲ್ಲ ಪಕ್ಷಗಳಿಗೂ ಅನ್ವಯಿಸುತ್ತದೆ. ಎರಡು ಪಕ್ಷ ಮೈತ್ರಿ ಮಾಡಿಕೊಂಡಾಗ ಸವಾಲು ಇದ್ದೇ ಇರುತ್ತದೆ. ಸರಿಯಾಗಿ ನಿರ್ವಹಣೆ ಮಾಡಿಕೊಂಡು ಹೋಗುವ ಜವಾಬ್ದಾರಿ ಯಾರಿಗಿದೆಯೋ ಅವರು ಅದನ್ನು ಮಾಡುತ್ತಾರೆ ಎಂದು ಹೇಳಿದರು.
ಮಂಡ್ಯದಲ್ಲಿ ಬೇರೆ ಬಾಡಿಗೆ ಮನೆಗೆ ಸ್ಥಳಾಂತರ ಆಗಿದ್ದೇವೆ. ಹಿಂದಿನ ಮನೆಯವರಿಗೆ ಆ ಮನೆ ಬೇಕಾಗಿದ್ದರಿಂದ ಬೇರೆ ಬಾಡಿಗೆ ಮನೆಗೆ ಹೋಗಿದ್ದೇವೆ. ಮಂಡ್ಯದಲ್ಲಿ ಯಾವತ್ತೂ ಮನೆ ಇದ್ದೇ ಇರುತ್ತದೆ. ಅಲ್ಲಿರುವ ನಿವೇಶನದಲ್ಲಿ ಚಿಕ್ಕದೊಂದು ಮನೆ ಕಟ್ಟಿಸುವ ಯೋಜನೆಯಿದೆ ಎಂದು ಸುನಲತಾ ಅಂಬರೀಷ್ ಹೇಳಿದರು.