

ಹಾಸನ: ಗ್ರಾಹಕರಿಗೆ ಮಾರಾಟ ಮಾಡಲು ಟ್ರೇನಲ್ಲಿ ಇಟ್ಟಿದ್ದ ಮಾಂಸಾಹಾರವನ್ನು ಆ ಹೋಟೆಲ್ ಮಾಲೀಕನ ಮಗನೇ ಎಂಜಲು ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುತ್ತೆ. ದುರಂತ ಎಂದರೆ ಆತ ಎಂಜಲು ಮಾಡಿದ ಆಹಾರವನ್ನು ಗ್ರಾಹಕರಿಗೂ ಬಡಿಸಲಾಗಿದೆ.
ಇಲ್ಲಿನ ಎಸ್ಜೆಪಿ ರಸ್ತೆಯಲ್ಲಿರುವ ಮಾಂಸಾಹಾರಿ ಹೋಟೆಲ್ 'ಬಿರಿಯಾನಿ ಪ್ಯಾಲೇಸ್'ನಲ್ಲಿ ಈ ಕೃತ್ಯ ನಡೆದಿದೆ. ಸೋಮವಾರ ಸಂಜೆ ಟ್ರೇನಲ್ಲಿದ್ದ ಆಹಾರ ಪದಾರ್ಥದಲ್ಲಿ ಮಾಂಸದ ತುಂಡುಗಳನ್ನು ಸ್ಟಿಕ್ವೊಂದರಲ್ಲಿ ಹೋಟೆಲ್ ಮಾಲೀಕನ ಮಗ ಮಹಮದ್ ಸೈಫ್ ಪದೇಪದೆ ತಿನ್ನುತ್ತ ಎಂಜಲು ಮಾಡಿದ್ದಾನೆ. ಈತನ ಕೃತ್ಯವನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಸೆರೆ ಹಿಡಿದು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕರೊನಾ ಸೋಂಕು ಹರಡುವ ಭೀತಿ ಎಲ್ಲೆಡೆ ದಟ್ಟವಾಗಿರುವ ಸಂದರ್ಭದಲ್ಲಿ ಈ ವಿಡಿಯೋ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಮಾಂಸಾಹಾರಕ್ಕೆ ಎಂಜಲು ಮಾಡಿದ ಹೋಟೆಲ್ನವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬಂದಿತ್ತು. ಮಂಗಳವಾರ ಬೆಳಗ್ಗೆ ಹೋಟೆಲ್‌ಗೆ ಭೇಟಿ ನೀಡಿದ ನಗರಸಭೆ ಆಯುಕ್ತ ಆರ್. ಕೃಷ್ಣಮೂರ್ತಿ ಹಾಗೂ ಇತರ ಅಧಿಕಾರಿಗಳು ಹೋಟೆಲ್ ಅನ್ನು ಬಂದ್ ಮಾಡಿ ಸೀಲ್ಡೌನ್ಗೆ ಒಳಪಡಿಸಿದರು.
ಇದನ್ನೂ ಓದಿರಿ ಕ್ವಾರಂಟೈನ್ ಕೇಂದ್ರದಲ್ಲಿ ಕಾಂಡೋಮ್ ರಾಶಿ!
ಸೋಮವಾರ ರಾತ್ರಿಯೇ ಬಡಾವಣೆ ಪೊಲೀಸ್ ಠಾಣೆಯಲ್ಲಿ ಹೋಟೆಲ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಸ್ವಚ್ಛತೆಗೆ ಆದ್ಯತೆ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ವೈದ್ಯ ಲೋಕವೇ ಹೇಳುತ್ತಿದೆ. ಆದರೆ, ಇದ್ಯಾವೂದಕ್ಕೂ ಕ್ಯಾರೆ ಎನ್ನದ ಈ ಹೋಟೆಲ್ ಮಾಲೀಕನ ಮಗ ಗ್ರಾಹಕರ ಜೀವದ ಜೊತೆ ಆಟವಾಡಿದ್ದಾನೆ. ನಿನ್ನೆ(ಸೋಮವಾರ) ಮಾತ್ರವಲ್ಲ, ನಿತ್ಯವೂ ಈತ ಎಂಜಲು ಮಾಡುತ್ತಿದ್ದ ಎನ್ನಲಾಗಿದೆ.
ಈ ವಿಡಿಯೋ ನೋಡಿ