ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನರಿಗೆ ಕಾಂಗ್ರೆಸ್ ನಿಂದ ಉಂಡೆ ನಾಮ; ಕುಮಾರಸ್ವಾಮಿ ಟೀಕೆ

HD Kumaraswamy
Published on

ಬೆಂಗಳೂರು: ಕಾಂಗ್ರೆಸ್ ಚುನಾವಣೆಗೋಸ್ಕರ ಜನರನ್ನು ದಾರಿ ತಪ್ಪಿಸುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಉಂಡೆ ನಾಮ ಹಾಕುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಜೆ.ಪಿ.ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣದಲ್ಲಿ ಚುನಾವಣಾ ಭಾಷಣ ಮಾಡಲು ಹೋಗಿ ಅಪಮಾನಕ್ಕೀಡಾಗಿ ಬಂದಿದ್ದಾರೆ.

ಕರ್ನಾಟಕದ ರೈತರಿಗೆ ಬಿಜೆಪಿ ಸರ್ಕಾರ 4000 ಕೊಡುತ್ತಿತ್ತು. ಅದನ್ನು ನಿಲ್ಲಿಸಿ ರೈತರಿಗೆ ದ್ರೋಹ ಬಗೆದಿದ್ದೀರಿ.

ರಾಜ್ಯದಲ್ಲಿ 65 ಲಕ್ಷ ಹೆ. ಬೆಳೆ ನಷ್ಟವಾಗಿದೆ. ನಯಾ ಪೈಸೆ ಪರಿಹಾರ ಕೊಟ್ಟಿಲ್ಲ.

ಕಾಂಗ್ರೆಸ್ ಮೋಸ ಮಾಡುತ್ತಿದೆ. ಗೃಹಲಕ್ಷ್ಮಿ ಇನ್ನು 10 ಲಕ್ಷ ಕುಟುಂಬಕ್ಕೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಸರ್ವರ್ ಡೌನ್ ಎನ್ನುತ್ತಾರೆ.

ಗೃಹ ಜ್ಯೋತಿ ಮಾಡಿ ಕರ್ನಾಟಕದ ಜನತೆಗೆ ಕತ್ತಲೆ ಭಾಗ್ಯ ಕರುಣಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಕ್ತಿ ಕಾರ್ಯಕ್ರಮ ಬಹಳ ದೊಡ್ಡ ಸುದ್ದಿ ಮಾಡಿಬಿಟ್ಟಿದ್ದಾರೆ. ಮಕ್ಕಳಿಗೆ ಶಾಲೆಗೆ ಹೋಗಲು ಬಸ್ ಸಿಗುತ್ತಿಲ್ಲ. ಅಂಥ ಪರಿಸ್ಥಿತಿ ತಂದಿಟ್ಟಿದ್ದಾರೆ ಎಂದು ಹರಿಹಾಯ್ದರು.

ಯುವ ನಿಧಿ ಹೆಸರಿನಲ್ಲಿ ಯುವಕರಿಗೆ ಉಂಡೆ ನಾಮ ಹಾಕಿದ್ದಾರೆ. 3000 ರೂ ಕೊಡುತ್ತೇವೆ ಎಂದವರು 2024 ಕ್ಕೆ ಕೊಡುತ್ತೇವೆ ಎನ್ನುತ್ತಿದ್ದಾರೆ. ಇದೇನಾ ನಿಮ್ಮ ಗ್ಯಾರಂಟಿ ಎಂದು ಕೆಣಕಿದರು.

ಸಿದ್ದರಾಮಯ್ಯ ಅವರೇ ನೀವು ಐದು ವರ್ಷ ಸಿಎಂ ಆದಾಗ 2.42 ಲಕ್ಷ ಕೋಟಿ ಸಾಲ ಮಾಡಿದ್ದೀರಿ. 14 ಬಜೆಟ್ ಮಂಡಿಸಿದ ಆರ್ಥಿಕ ತಜ್ಞತೆ ಎಂದರೆ ಇದೇನಾ ಎಂದು ಪ್ರಶ್ನಿಸಿದರು.

ಮೋದಿ ಸಾಲ ಮಾಡಿದ್ದಾರೆ ಎಂದು ಆರೋಪಿಸುತ್ತೀರಿ, ನೀವು ಮಾಡಿದ್ದೇನು? ಸಾಲ ತೀರಿಸಲು ಹಣ ಎಲ್ಲಿಂದ ತರುತ್ತೀರಿ. ಪ್ರತಿ ವರ್ಷ 56000 ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಲ್ಲವೆ? ರಾಜ್ಯದ ಸಂಪನ್ಮೂಲ ಕ್ರೋಢೀಕರಣ ಕುಸಿಯುತ್ತಿದೆ. ನೀವೇನು ಮಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಛೇಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net