

ಬೆಂಗಳೂರು: ಶಿಕ್ಷಕರೊಬ್ಬರಿಗೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ್ದ ಸೈಬರ್ ವಂಚಕರು ೩೨.೨೫ ಲಕ್ಷ ರೂ. ದೋಚಿರುವ ಪ್ರಕರಣ ನಡೆದಿದೆ.
ದೇವನಹಳ್ಳಿ ನಿವಾಸಿ ಚತುರ ರಾವ್(೫೦) ಎಂಬ ಶಿಕ್ಷಕ ನೀಡಿರುವ ದೂರಿನನ್ವಯ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ.೨ ರಂದು ಫೆಡೆಕ್ಸ್ ಕೊರಿಯರ್ ಕಂಪನಿಯ ಪ್ರತಿನಿಧಿ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ನಿಮ್ಮ ಹೆಸರಿನಲ್ಲಿ ಕೊರಿಯರ್ ಪಾರ್ಸೆಲ್ ಬಂದಿದ್ದು, ಅದರಲ್ಲಿ ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್, ಐದು ಪಾಸ್‌ಪೋರ್ಟ್, ಐದು ಕ್ರೆಡಿಟ್ ಕಾರ್ಡ್ ಮತ್ತು ಒಂದು ಲ್ಯಾಪ್‌ಟಾಪ್ ಪತ್ತೆಯಾಗಿದೆ. ಈ ಪ್ರಕರಣವನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರಿಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ವಿಚಾರಣೆಗಾಗಿ ನೀವು ವೀಡಿಯೋ ಕರೆಯ ಮೂಲಕ ಮಾತನಾಡಬೇಕಾಗುತ್ತದೆ. ಆದ್ದರಿಂದ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿ ಎಂದಿದ್ದ. ನಂತರ ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಸಿಬ್ಬಂದಿಯೆಂದು(ಆಂಟಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ವಿಡಿಯೋ ಕರೆ ಮಾಡಿದ್ದ ಮತ್ತೋರ್ವ ಆರೋಪಿ ಯಾರೋ ನಿಮ್ಮ ಹೆಸರು ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಿಳಿದುಕೊಳ್ಳಬೇಕಾದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸಬೇಕು ಎಂದಿದ್ದ. ಆರೋಪಿಗಳ ಸಂಚು ಅರಿಯದ ಚತುರ ರಾವ್ ಆತಂಕಗೊಂಡು ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ೩೨.೨೫ ಲಕ್ಷ ರೂ.ವರ್ಗಾಯಿಸಿದ್ದರು. ನಂತರ ಆರೋಪಿಗಳು ಸಂಪರ್ಕಕ್ಕೆ ಸಿಗದೆ ವಂಚಿಸಿದ್ದಾರೆ. ಸದ್ಯ ಹಣ ಕಳೆದುಕೊಂಡಿರುವ ಚತುರ ರಾವ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.