ವಿವಾದದಲ್ಲಿ ‘ಚೌಹಾಣ್’: ಅಜಯ್ ದೇವ್ಗನ್ ಚಿತ್ರದ ಟೈಟಲ್‌ಗೆ ರಜಪೂತ್ ಸಮುದಾಯ ವಿರೋಧ

ಚೌಹಾಣ್ ಚಿತ್ರದ ಪೋಸ್ಟರ್​
ಚೌಹಾಣ್ ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಚೌಹಾಣ್​ ಚಿತ್ರದ ಟೈಟಲ್ ಗೆ ಕ್ಷತ್ರಿಯ ಪರಿಷತ್ ಆಕ್ರೋಶ
  • ಶೀರ್ಷಿಕೆ ಬದಲಿಸುವಂತೆ ಆಗ್ರಹ
  • ಚೌಹಾಣ್ ಹೆಸರು ರಜಪೂತ ಪರಂಪರೆಗೆ ಸೇರಿದ್ದು ಎಂದ ಸಂಘ
ಇತ್ತೀಚೆಗಷ್ಟೇ ಶ್ರದ್ಧಾ ಕಪೂರ್ ಅಭಿನಯದ ‘ಈಠಾ’ ಚಿತ್ರದ ಟೈಟಲ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮಹಾರಾಷ್ಟ್ರದ ಲಾವಣಿ ಡಾನ್ಸರ್ ವಿಠಾಬಾಯಿ ನಾರಾಯಣ್‌ಗಾಂವ್ಕರ್ ಬಯೋಪಿಕ್ ಇದಾಗಿದ್ದು, ಟೈಟಲ್‌ಗೆ ಸಂಬಂಧಿಸಿದ್ದಂತೆ ವಿಠಾಬಾಯಿ ಕುಟುಂಬದವರು ಸೇರಿ ಎನ್‌ಸಿಪಿ ಮುಖಂಡರು ಭಾರೀ ವಿರೋಧ ವ್ಯಕ್ತಪಡಿಸಿ ಶೀರ್ಷಿಕೆ ಬದಲಿಸುವಂತೆ ಮನವಿ ಮಾಡಿದ್ದಾರೆ. ಈ ವಿವಾದ ಬಗೆಹರಿಯುವ ಮುನ್ನವೇ ಬಾಲಿವುಡ್‌ನ ಮತ್ತೊಂದು ಸಿನಿಮಾದ ಟೈಟಲ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಹೌದು, ನಟ ಅಜಯ್ ದೇವ್ಗನ್ ಮತ್ತು ನಿರ್ದೇಶಕ ನೀರಜ್ ಯಾದವ್ ಕಾಂಬಿನೇಷನ್‌ನಲ್ಲಿ ಇತ್ತೀಚೆಗೆ ‘ಚೌಹಾಣ್’ ಸಿನಿಮಾ ಘೋಷಣೆಯಾಗಿತ್ತು. ಆದರೆ, ಟೈಟಲ್‌ಗೆ ರಜಪೂತ್ ಸಮುದಾಯದ ‘ಕ್ಷತ್ರಿಯ ಪರಿಷತ್’ ಭಾರೀ ವಿರೋಧ ವ್ಯಕ್ತಪಡಿಸಿದ್ದು, ಸಮುದಾಯದ ಹೆಸರನ್ನು ರಾಜಕೀಯಗೊಳಿಸಬೇಡಿ ಎಂದು ಆಗ್ರಹಿಸಿದೆ. ಜತೆಗೆ ಶೀರ್ಷಿಕೆ ಬದಲಿಸುವಂತೆ ತಿಳಿಸಿದೆ. ‘ಅಜಯ್ ದೇವ್ಗನ್‌ರ ಮುಂಬರುವ ಚಿತ್ರಕ್ಕೆ ‘ಚೌಹಾಣ್’ ಎಂದು ಹೆಸರಿಟ್ಟಿರುವುದನ್ನು ಕ್ಷತ್ರಿಯ ಪರಿಷತ್ ವಿರೋಧಿಸುತ್ತದೆ. ಸದ್ಯ ನಡೆಯುತ್ತಿರುವ ಕೋಮು ರಾಜಕಾರಣಕ್ಕೆ ಸಮುದಾಯದ ಹೆಸರನ್ನು ಬಳಸುವ ಪ್ರಯತ್ನವಾಗಿದ್ದು, ಇದನ್ನು ಬಲವಾಗಿ ಖಂಡಿಸುತ್ತೇವೆ. ‘ಚೌಹಾಣ್’ಗಳ ಪರಂಪರೆ ರಜಪೂತ್ ಇತಿಹಾಸಕ್ಕೆ ಸೇರಿದ್ದಾಗಿದ್ದು, ಸೈದ್ಧಾಂತಿಕ ಉದ್ದೇಶಗಳಿಗಾಗಿ ಸಮುದಾಯದ ಗುರುತನ್ನು ಬಳಸುವುದು ಸಲ್ಲ’ ಎಂದು ಕ್ಷತ್ರಿಯ ಪರಿಷತ್ ಖಂಡಿಸಿ, ಪತ್ರ ಬರೆದಿದೆ. ಈ ವಿವಾದದ ಬಗ್ಗೆ ಅಜಯ್ ದೇವ್ಗನ್ ಆಗಲಿ, ನೀರಜ್ ಯಾದವ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಕ್ಟೋಬರ್ 1ಕ್ಕೆ ‘ಚೌಹಾಣ್’ ದೇಶಾದ್ಯಂತ ರಿಲೀಸ್ ಆಗುತ್ತಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net