ಮಹಿಳೆಯ ಪ್ರಾಣ ಉಳಿಸಿದ ಚಾಟ್​ಜಿಪಿಟಿ

14-680d1e8f49cb6
Published on

ನ್ಯೂಯಾರ್ಕ್: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಮಾನವರ ಸ್ಥಾನಕ್ಕೆ ಬರಬಲ್ಲದೇ ಎಂಬ ಚರ್ಚೆ ನಡೆಯುತ್ತಿರುವ ನಡುವೆಯೇ ಎಐ ನೆರವಿನಿಂದ ಮಹಿಳೆಯೊಬ್ಬಳ ಪ್ರಾಣ ಉಳಿದ ಪ್ರಕರಣವೊಂದು ಅಮೆರಿಕದಿಂದ ವರದಿ ಯಾಗಿದೆ. 40 ವರ್ಷದ ಮಹಿಳೆಯಲ್ಲಿ ಕ್ಯಾನ್ಸರ್ ಇರುವುದನ್ನು ಚಾಟ್​ಜಿಪಿಟಿ ನೆರವಿನಿಂದ ಪತ್ತೆ ಹಚ್ಚಿರುವ ಈ ಪ್ರಕರಣ ಎಐ ಜಗತ್ತಿನ ಗಮನ ಸೆಳೆದಿದೆ.

ಅಮೆರಿಕದ ಲಾರೆನ್ ಬನಾನ್ ಎಂಬ ಈ ಮಹಿಳೆಯಲ್ಲಿ ಕ್ಯಾನ್ಸರ್ ಇರುವಿಕೆಯನ್ನು ಪತ್ತೆ ಮಾಡುವಲ್ಲಿ ವೈದ್ಯರು ಹಲವು ಸಲ ವಿಫಲರಾಗಿದ್ದರು. ಅಂತಿಮವಾಗಿ, ಚಾಟ್​ಜಿಪಿಟಿ ಆ ಮಹಿಳೆಯ ನೆರವಿಗೆ ಬಂದಿದ್ದು ಆಕೆಯ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ, ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಬೆರಳುಗಳನ್ನು ಮಡಚುವುದು ಬನಾನ್​ಗೆ ಕಷ್ಟವಾಗಿತ್ತು. ಅನೇಕ ವೈದ್ಯರ ಬಳಿ ಓಡಾಡಿದ ಬಳಿಕ ಆಕೆಯಲ್ಲಿ ಕೀಲು ಸಂಧಿವಾತ (ರುಮಟಾಯ್್ಡ ಆಥಿರ್Åಟಿಸ್) ಇದೆಯೆಂದು ಡಯಾಗ್ನಸ್ ಮಾಡಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಬನಾನ್ ನಾಟಕೀಯವಾಗಿ ಆರು ಕೆಜಿ ತೂಕವನ್ನು ಕಳೆದುಕೊಂಡಿದ್ದರು. ಹಾಗೂ ಹೊಟ್ಟೆ ನೋವಿನ ಅನುಭವ ಆರಂಭವಾಗಿತ್ತು. ಆದರೆ, ಆಮ್ಲದ ಹಿಮ್ಮುಖ ಹರಿಯುವಿಕೆ (ಆಸಿಡ್ ರೀಫ್ಲಕ್ಸ್) ಅದಕ್ಕೆ ಕಾರಣವೆಂದು ವೈದ್ಯರು ಹೇಳಿದ್ದರು.

ಎಐಗೆ ಮೊರೆ: ವೈದ್ಯರ ಹೇಳಿಕೆಗಳು ಹಾಗೂ ತನ್ನ ಪರಿಸ್ಥಿತಿಯಿಂದ ಹತಾಶಗೊಂಡ ಬನಾನ್, ನಿಜವಾದ ಕಾರಣವನ್ನು ತಿಳಿಯಲು ಎಐಗೆ ಮೊರೆ ಹೋಗಲು ನಿರ್ಧರಿಸಿದರು. ತನ್ನ ರೋಗ ಲಕ್ಷಣಗಳನ್ನು ಚಾಟ್​ಜಿಪಿಟಿಯೊಂದಿಗೆ ಹಂಚಿಕೊಂಡು ಅದರ ಸೂಚನೆ ಮೇರೆಗೆ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡಾಗ ಬನಾನ್ ಕತ್ತಿನ ಕ್ಯಾನ್ಸರ್ ವ್ಯಾಧಿಯಿಂದ ಬಳಲುತ್ತಿರುವುದು ದೃಢಪಟ್ಟಿದೆ. ಒಂದು ವೇಳೆ ತಾನು ಕೀಲು ಸಂಧಿವಾತಕ್ಕೆ ಔಷಧಿಯನ್ನು ಮುಂದುವರಿಸಿದ್ದರೆ ಕ್ಯಾನ್ಸರ್, ಕತ್ತಿನಿಂದ ದೇಹದ ಇತರ ಭಾಗಗಳಿಗೂ ಹರಡಲಿತ್ತು. ‘ಚಾಟ್​ಜಿಪಿಟಿ ನನ್ನ ಪ್ರಾಣವನ್ನು ಉಳಿಸಿದೆ’ ಎಂದು ಬನಾನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net