ChatGPT: ಎಐನಿಂದ ಕ್ರಿಯೆಟ್​ ಮಾಡಿ ಉದ್ಯೋಗಾಕಾಂಕ್ಷಿ ಕಳುಹಿಸಿದ ರೆಸ್ಯೂಮ್​ ನೋಡಿ ಶಾಕ್​ ಆದ ಕಂಪನಿಯ ಸಿಇಒ!

ChatGPT
Published on

ನವದೆಹಲಿ: ಚಾಟ್​ಜಿಪಿಟಿ ( ChatGPT ) ಟೆಕ್ನಾಲಜಿ ಹಲವು ವಿಧಗಳಲ್ಲಿ ಜನರಿಗೆ ಪ್ರಯೋಜನಕಾರಿಯಾಗಿದೆ. ಆದರೆ, ಅದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಇಲ್ಲದಿದ್ದರೆ, ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದೆಹಲಿ ಮೂಲದ ಕಂಪನಿಯೊಂದರ ಸಿಇಒ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಾಟ್‌-ಜಿಪಿಟಿ ( ChatGPT ) ಸಹಾಯದಿಂದ ಬರೆದ ನಂತರವೂ ಪ್ರೂಫ್ ರೀಡಿಂಗ್ ಏಕೆ ಮುಖ್ಯ ಎಂಬುದನ್ನು ಜನರಿಗೆ ವಿವರಿಸಿದ್ದಾರೆ.

ಎಂಟ್ರೇಜ್ ಕಂಪನಿಯ ಸಿಇಒ ಅನನ್ಯ ನಾರಂಗ್ ಅವರು, ತಮ್ಮ ಕಂಪನಿಯ ಕೆಲಸಕ್ಕೆ ಅಪ್ಲೆಕೇಶನ್​ ಹಾಕಿದ್ದ ಉದ್ಯೋಗಾಕಾಂಕ್ಷಿಯ ಜಾಬ್​ ರೆಸ್ಯೂಮ್​ ಸ್ಕ್ರೀನ್‌ಶಾಟ್ ಅನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅದರಲ್ಲಿರುವ ತಪ್ಪನ್ನು ಎತ್ತಿ ತೋರಿಸಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದು, ಹೀಗೂ ರೆಸ್ಯೂಮ್​ ಮಾಡುತ್ತಾರಾ ಎಂದಿದ್ದಾರೆ. ಸ್ಕ್ರೀನ್‌ಶಾಟ್ ನೋಡಿದರೆ, ಬಹುಶಃ ಅಪ್ಲಿಕೇಶನ್​ ಹಾಕಿರುವ ವ್ಯಕ್ತಿ, ರೆಸ್ಯೂಮ್​ ಅನ್ನು ಸರಿಯಾಗಿ ಓದದೆ ಕಾಪಿ ಮತ್ತು ಪೇಸ್ಟ್ ಮಾಡಿರಬಹುದು ಎಂದು ತೋರುತ್ತದೆ.

ರೆಸ್ಯೂಮ್​ನಲ್ಲಿ ವೈಯಕ್ತಿಕ ಮಾಹಿತಿಯನ್ನು ಬದಲಿಸುವ ಟೆಂಪ್ಲೇಟ್ ಪ್ಲೇಸ್‌ಹೋಲ್ಡರ್‌ಗಳನ್ನು ಸ್ಕ್ರೀನ್‌ಶಾಟ್​​ನಲ್ಲಿ ನೋಡಬಹುದು. ನಿಮ್ಮ ಕೌಶಲ್ಯವನ್ನು ಉಲ್ಲೇಖಿಸಿ ಎಂದು ಚಾಟ್​ಜಿಪಿಟಿ ಬರೆದಿದೆ. ಆದರೆ, ಅದರ ವಿವರಣೆಯನ್ನೇ ನೀಡಿಲ್ಲ. ನಿಮ್ಮ ಪ್ರಾಜೆಕ್ಟ್​ ಮತ್ತು ಅನುಭವದ ಬಗ್ಗೆ ವಿವರಿಸಿ ಎಂದು ಚಾಟ್​ಜಿಪಿಟಿ ಬರೆದಿದೆ. ಅದನ್ನು ಸಹ ಹಾಗೇ ಬಿಡಲಾಗಿದೆ. ಅನೇಕ ಸ್ಥಳಗಳಲ್ಲಿ ವೈಯಕ್ತಿಕ ಮಾಹಿತಿಯ ಬದಲಿಗೆ ಕೇವಲ ಟೆಂಪ್ಲೇಟ್‌ಗಳು ಮಾತ್ರ ಗೋಚರಿಸುತ್ತವೆ.

ChatGPT 1

ಈ ರೆಸ್ಯೂಮ್​ ನೋಡಿದ ಎಂಟ್ರೇಜ್ ಕಂಪನಿಯ ಸಿಇಒ ಅನನ್ಯ ನಾರಂಗ್ ಒಂದು ಕ್ಷಣ ಶಾಕ್ ಆಗಿದ್ದಾರೆ. ಅಭ್ಯರ್ಥಿಯು ಚಾಟ್‌ಜಿಪಿಟಿಯನ್ನು ಅಪ್ಲಿಕೇಶನ್‌ಗಾಗಿ ಬಳಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಜಾಬ್​ ರೆಸ್ಯೂಮ್​ ಸ್ಕ್ರೀನ್‌ಶಾಟ್ ಅನ್ನು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ChatGPT 2

ನಾನು ಮತ್ತೊಂದು ಜಾಬ್​ ಅಪ್ಲಿಕೇಶನ್​ ಸ್ವೀಕರಿಸಿದೆ. ನಮ್ಮಲ್ಲಿ ನಿರುದ್ಯೋಗವಿದ್ದರೂ ಆಶ್ಚರ್ಯವಿಲ್ಲ ಎಂದು ಬರೆದಿರುವ ಅನನ್ಯ ನಾರಂಗ್​, ಈ ರೀತಿಯ ಅಪ್ಲಿಕೇಶನ್​ಗಳಿಗೆ ಹೇಗೆ ಪ್ರತಿಕ್ರಿಯಿಸುವುದು? ಎಂದು ಎಕ್ಸ್​ ವೇದಿಕೆಯಲ್ಲಿ ನೆಟ್ಟಿಗರ ಸಲಹೆ ಕೇಳಿದ್ದಾರೆ. ಅನೇಕ ಅಭ್ಯರ್ಥಿಗಳಂತೆ, ಈ ವ್ಯಕ್ತಿಯು ChatGPT ಸಹಾಯದಿಂದ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೂ, ಕಳುಹಿಸುವ ಮುನ್ನ ಮತ್ತೆ ಓದುವ ಯತ್ನವೂ ಮಾಡಲಿಲ್ಲ ಎಂದು ನಾರಂಗ್​ ಅವರು ಬೇಸರು ವ್ಯಕ್ತಪಡಿಸಿದರು. ಸದ್ಯ ನಾರಂಗ್​ ಅವರ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net