

ಬೆಂಗಳೂರು: ಗೂಗಲ್, ಈಗ ಕೇವಲ ಸರ್ಚ್ ಇಂಜಿನ್ ಆಗಿ ಉಳಿದಿಲ್ಲ. ಇದು ಅದೆಷ್ಟೋ ಜನರಿಗೆ ಅಂತರ್ಜಾಲದ ಪ್ರವೇಶ ಬಿಂದುವಾಗಿದೆ. ಆದರೆ, ಕೃತಕ ಬುದ್ಧಿಮತ್ತೆ ಜಗತ್ತನ್ನು ಆಕ್ರಮಿಸಿಕೊಂಡಂತೆ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಈಗ ಮುಳುಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಎಐ ಚಾಟ್‌ಬಾಟ್ - ಚಾಟ್ಜಿಪಿಟಿನಿಂದಾಗಿ ಗೂಗಲ್ ಚಿಂತಾಕ್ರಾಂತವಾಗಿದೆ.
1998 ರಲ್ಲಿ ಹುಟ್ಟಿದಾಗಿನಿಂದ, ಕೇವಲ ಸರ್ಚ್ ಇಂಜಿನ್ ಆಗಿದ್ದ ಗೂಗಲ್, ಯಾಹೂ, ಎಒಎಲ್, ಬಿಂಗ್ ನಂತಹ ಇತರ ಸರ್ಚ್ ಇಂಜಿನ್‌ಗಳನ್ನು ಮಾರುಕಟ್ಟೆಯಲ್ಲಿ ಸೋಲಿಸಿ ಮುನ್ನಡೆದಿದೆ. ಇದೀಗ, ಕೃತಕ ಬುದ್ಧಿಮತ್ತೆ ಅಥವಾ ಎಐ ಮಾಹಿತಿ ಪ್ರಪಂಚದ ಸರದಾರ ಗೂಗಲ್ಅನ್ನು ಸೋಲಿಸಲಿದೆ ಎನ್ನಲಾಗುತ್ತಿದೆ.
ಎಐ ಸಂಶೋಧನಾ ಕಂಪನಿಯಾದ ಓಪನ್ ಎಐ (OpenAI) ತನ್ನ ಚಾಟ್ಜಿಪಿಟಿ(ChatGPT) ಎನ್ನುವ ಒಂದು ಚಾಟ್‌ಬಾಟ್ಅನ್ನು ಜಗತ್ತಿನ ಎದುರಿಟ್ಟಾಗ ಅದು ಅದರ ಸೃಜನಶೀಲ ಉತ್ತರಗಳಿಗಾಗಿ ವೈರಲ್ ಆಗಿತ್ತು.
ಅಂದಿನಿಂದ, ನಾವು ಗೂಗಲ್ನಲ್ಲಿ ಟೈಪ್ ಮಾಡಿ ಸಂಬಂಧಿಸಿದ ವೆಬ್ಸೈಟನ್ನು ಹುಡುಕಿ ಉತ್ತರ ಓದುವುದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ. ಚಾಟ್ ಜಿಪಿಟಿ ಅಂತಹ ಎಐ ಬಳಸಿಕೊಂಡು ಕೇಳಿದ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಸ್ಕ್ರೀನ್ ಮೇಲೆಯೇ ನೋಡಬಹುದು ಅಥವಾ ಕೇಳಬಹುದು. ಇದು ಗೂಗಲ್ಗೆ ಅತೀ ದೊಡ್ಡ ಸವಾಲನ್ನು ಎಸೆದಿದೆ.
ಗೂಗಲ್ ಬಳಿ ಎಐ ಇಲ್ಲವೇ? ಇದ್ದರೂ ಚಾಟ್ ಜಿಪಿಟಿ ಇಂದ ಅದಕ್ಕೆ ಆಗುತ್ತಿರುವ ಸಂಕಷ್ಟ ಏನು?
ಗೂಗಲ್, ತನ್ನ ಆದಾಯವನ್ನು ಗಳಿಸುವುದು ಜಾಹೀರಾತುಗಳಿಂದ. ನಾವು ಏನನ್ನೇ ಹುಡುಕಿದರೂ ಸರ್ಚ್ ರಿಸಲ್ಟ್ ವಬರುವಾಗ ಎಲ್ಲದರ ಮೇಲೆ ಜಾಹೀರಾತುಗಳನ್ನೇ ನಾವು ಕಾಣಬಹುದು. ಇದೇ ಸಮಸ್ಯೆಯ ಮೂಲ. ಚಾಟ್ಜಿಪಿಟಿಈರೀತಿ ಕಾರ್ಯ ನಿರ್ವಹಿಸುವುದಿಲ್ಲ. ಬದಲಾಗಿ, ನಾವು ಕೇಳಿದ ಪ್ರಶ್ನೆಗೆ ಸಂಬಂಧಿಸಿದಂತೆ ಬೇಕಾದ ಉತ್ತರವನ್ನು ತಾನೇ ಅಂತರ್ಜಾಲದಲ್ಲಿ ಹುಡುಕಿ ಥೇಟ್ ಮನುಷ್ಯರಂತೆಯೇ ಸರಳ ವಾಕ್ಯಗಳನ್ನು ರಚಿಸಿ ಉತ್ತರಿಸುತ್ತದೆ. ಇಲ್ಲಿ ನಮ್ಮ ಹಾಗೂ ನಮಗೆ ಬೇಕಾದ ಉತ್ತರದ ನಡುವೆ ಯಾವುದೇ ರೀತಿಯ ಜಾಹೀರಾತುಗಳು ಇರುವುದಿಲ್ಲ.
ಹಾಗಾದರೆ ಗೂಗಲ್ನ ವಾಯ್ಸ್ ಅಸಿಸ್ಟೆಂಟ್ ಏನು?
ಗೂಗಲ್ನ ವಾಯ್ಸ್ ಅಸಿಸ್ಟೆಂಟ್ ಕೂಡ ಬಹುತೇಕ ಚಾಟ್ಜಿಟಿಪಿಯಂತೆಯೇ ಕೆಲಸ ಮಾಡಿದರೂ ಅದು ಎಲ್ಲಾ ರೀತಿಯ ಕ್ಲಿಷ್ಟ ಪ್ರಶ್ನೆಗಳಿಗೂ ಸಮರ್ಪಕವಾಗಿ ಉತ್ತರಿಸುವುದಿಲ್ಲ. ಅನೇಕ ಬಾರಿ ಅದು ನಮಗೆ ಬೇಕಾದ ಉತ್ತರ ಇರುವ ವೆಬ್ಸೈಟಿನ ಬಗ್ಗೆ ಮಾಹಿತಿ ನೀಡುತ್ತದೆ. ಈ ಮೂಲಕ ಅದು ಜಾಹೀರಾತಿನ ಮೂಲಕ ಬರುವ ಆದಾಯವನ್ನು ಅದು ಕಾಪಾಡಿಕೊಳ್ಳುತ್ತದೆ. ಹೀಗಾಗಿ ಗೂಗಲ್, ಈ ರೀತಿಯ ಹೊಸ ಟೆಕ್ನಾಲಜಿ ಎದುರು ಗೆಲ್ಲಬೇಕಾದರೆ ತನ್ನ ಬಿಸಿನೆಸ್ ಮಾಡೆಲ್ ಕೂಡ ಬದಲಾಯಿಸಿಕೊಳ್ಳ ಬೇಕಾಗುತ್ತದೆ. ಇಂದು ಗೂಗಲ್ಗೆ ಇರುವ ಸಾಮರ್ಥ್ಯದಲ್ಲಿ ಇದು ಸಾಧ್ಯ ಕೂಡ. ಆದರೆ ಅವರು ಈ ಜಾಹೀರಾತತುಗಳನ್ನು ಪ್ರದರ್ಶಿಸಲು ಹೊಸ ರೀತಿಯ ಉಪಾಯ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಗೂಗಲ್ನ ಅಂತ್ಯ ಕಟ್ಟಿಟ್ಟ ಬುತ್ತಿ.
ChatGPT ರೀತಿಯಲ್ಲೇ DALL-E ಕೂಡ ಕಾರ್ಯನಿರ್ವಹಿಸುತ್ತಿದೆ. OpenAI ನ, ಪಠ್ಯ ಪ್ರಾಂಪ್ಟ್‌ಗಳ ಆಧಾರದ ಮೇಲೆ ನೀಡುವ ಉತ್ತರಗಳು, ಫಲಿತಾಂಶಗಳು ಜಗತ್ತನ್ನೇ ಬೆರಗುಗೊಳಿಸಿವೆ. ಹಾಗಾಗಿ, ಗೂಗಲ್ ಚಿಂತಿಸಬೇಕಾದುದು ಕೇವಲ ChatGPT ಬಗ್ಗೆ ಮಾತ್ರ ಅಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ಹಾಗಾದರೆ ಚಾಟ್ ಜಿಟಿಪಿ ಅಂತಹ ಬಾಟ್ಗಳು ಮುಂದಿನ ಭವಿಷ್ಯವೇ?
ಅಲ್ಲ. ಏಕೆಂದರೆ ಸದ್ಯಕ್ಕೆ ಇವು ನಾವು ಕೇಳಿರುವ ಪ್ರಶ್ನೆಗಳ ಆಧಾರದಲ್ಲೇ ನಮ್ಮ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡು ನಾವು ಇಷ್ಟಪಡುವ ಉತ್ತರಗಳನ್ನು ನೀಡುತ್ತಿವೆ. ಈ ಮಾದರಿಯ ಸಮಸ್ಯೆ ಏನಪ್ಪಾ ಎಂದರೆ ಒಂದು ನಿರ್ದಿಷ್ಟ ಅವಧಿಯ ನಂತರ ಈ ಬಾಟ್, ಅಂತರ್ಜಾಲದಲ್ಲೇ ಲಭ್ಯ ಇರುವ ಸುಳ್ಳು ಮಾಹಿತಿಯನ್ನೂ ಜನರಿಗೆ ತಲುಪಿಸಬಹುದು. ಈ ಸಮಸ್ಯೆಯನ್ನು ಮೀರಿ ಚಾಟ್ಬಾಟ್ಗಳು ಬೆಳೆದರೆ ಇವು ಖಂಡಿತವಾಗಿಯೂ ಮಾಹಿತಿ ಜಗತ್ತಿನ ಮೇಲೆ ಗೂಗಲ್ಗೆ ಇರುವ ಪಾರುಪತ್ಯವನ್ನು ಅಂತ್ಯಗೊಳಿಸಬಹುದು.