ಬಾರ್​ನಲ್ಲಿ ಕೂರಲು ಸ್ಥಳ ಸಿಗದೇ ಕಿರಿಕ್​ ಮಾಡಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

bar
Published on

ಬೆಂಗಳೂರು: ಬಾರ್‌ನಲ್ಲಿ ಕಿರಿಕ್ ಮಾಡಿದ ಯುವಕನಿಗೆ ಬಾರ್‌ನ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿರುವ ಪ್ರಕರಣ ಬಸವೇಶ್ವರ ನಗರ ಸಮೀಪದ ಮಂಜುನಾಥ ನಗರದಲ್ಲಿ ನಡೆದಿದೆ. ಬಸವೇಶ್ವರನಗರದ ನಿವಾಸಿ ಪೆರುಮಾಳ್(26) ಹಲ್ಲೆಗೆ ಒಳಗಾದವರು.

ಈ ಸಂಬಂಧ ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೀರಪ್ಪ ಮತ್ತು ಗಣೇಶ್ ಸೇರಿ ಐವರು ಆರೋಪಿಗಳನ್ನು ವಶಕ್ಕೆಪಡೆದು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೀಣ್ಯದ ಕಾರ್ಖಾನೆಯೊಂದರಲ್ಲಿ ನೌಕರನಾಗಿರುವ ಪೆರುಮಾಳ್ ಶನಿವಾರ ರಾತ್ರಿ ಮಂಜುನಾಥ ನಗರದ ತಿಮ್ಮಯ್ಯ ರಸ್ತೆಯಲ್ಲಿರುವ ವೆಂಕಟಗಿರಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ತೆರಳಿ ಮದ್ಯ ಸೇವಿಸಲು ಮುಂದಾದ ಸಂದರ್ಭದಲ್ಲಿ ಕೂರಲು ಸ್ಥಳ ಸಿಕ್ಕಿರಲಿಲ್ಲ. ಇದರಿಂದ ಕೋಪಗೊಂಡ ಪೆರುಮಾಳ್ ಬಾರ್ ಸಪ್ಲಯರ್‌ಗಳು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಕೂಗಾಡಿ ಗಲಾಟೆ ನಡೆಸಿದ್ದಾನೆ.

ರಾತ್ರಿ 12.30ರ ಗಂಟೆವರೆಗೂ ಮದ್ಯ ಸೇವಿಸಿದ ನಂತರ ಹೊರಗೆ ಬಂದಾಗ ಬಾರ್‌ನ 5 ಮಂದಿ ಸಿಬ್ಬಂದಿ ದೊಣ್ಣೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಪೆರುಮಾಳ್ ನಂತರ ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿ ಆತನನ್ನು ಸ್ಥಳಕ್ಕೆ ಕರೆಸಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ನಂತರ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾನೆ. ದೂರಿನನ್ವಯ ಎಫ್​ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಬೀರಪ್ಪ, ಗಣೇಶ್ ಸೇರಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net