

ಬೆಂಗಳೂರು: ರಸ್ತೆ ತೆರಿಗೆ ಕಟ್ಟದೆ 2 ವರ್ಷದಿಂದ ಜೋಧಪುರ-ಬೆಂಗಳೂರು ಮಾರ್ಗದಲ್ಲಿ ಓಡಾಟ ನಡೆಸುತ್ತಿದ್ದ ರಾಜಸ್ಥಾನದ 2 ಖಾಸಗಿ ಬಸ್ಗಳನ್ನು ಯಶವಂತಪುರ ಆರ್ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ತೆರಿಗೆ ಪಾವತಿಸಿರುವುದಾಗಿ ಕಲರ್ ಜೆರಾಕ್ಸ್ ತೋರಿಸಿ ಯಾಮಾರಿಸಲು ಯತ್ನಿಸಿದ್ದರಿಂದ ಅನುಮಾನಗೊಂಡ ಅಧಿಕಾರಿಗಳು, ಪರಿಶೀಲನೆ ನಡೆಸಿದಾಗ ಚಾಸ್ಸಿ ನಂಬರನ್ನೇ ನಕಲು ಮಾಡಿರುವ ವಿಚಾರ ಬಯಲಿಗೆ ಬಂದಿದೆ. ರಾಜಸ್ಥಾನದ ಟ್ರಾವೆಲ್ಸ್ ಏಜೆನ್ಸಿಗೆ ಸೇರಿದ ಆರ್ಜೆ-19 ಪಿಬಿ-4598 ಮತ್ತು ಆರ್ಜೆ-19 ಪಿಬಿ-4599 ಸಂಖ್ಯೆಯ ಬಸ್ಗಳನ್ನು ಜ.3 ಮತ್ತು ಫೆ.12ರಂದು ಬೆಂಗಳೂರಿನಲ್ಲಿ ಜಪ್ತಿ ಮಾಡಲಾಗಿದೆ. 2 ತಿಂಗಳಾದರೂ ಈವರೆಗೆ ಮಾಲೀಕರು ಬಂದಿಲ್ಲ. 30 ಲಕ್ಷ ರೂ. ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆರ್ಟಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಕ್ಕಿಬಿದ್ದದ್ದು ಹೇಗೆ?: ಜ.3ರಂದು ಗೊರಗುಂಟೆ ಪಾಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್ಪೆಕ್ಟರ್ ಸುಧಾಕರ್, ಆರ್ಜೆ-19 ಪಿಬಿ-4598 ಸಂಖ್ಯೆ ಬಸ್ ತಡೆದು ದಾಖಲಾತಿ ಕೇಳಿದಾಗ ಚಾಲಕ/ಕ್ಲೀನರ್ ಕಲರ್ ಜ್ಹೆರಾಕ್ಸ್ ಪ್ರತಿ ಕೊಟ್ಟಿದ್ದಾರೆ. ಹೀಗಾಗಿ ಜಪ್ತಿ ಮಾಡಿ ಪರಿಶೀಲನೆ ಮುಂದುವರಿಸಿದಾಗ ಚಾಸ್ಸಿ ನಂಬರನ್ನು ಗ್ರೖೆಂಡಿಂಗ್ ಮಾಡಿ ಆ ಜಾಗದಲ್ಲಿ ಬೇರೊಂದು ಚಾಸ್ಸಿ ನಂಬರ್ ಅಚ್ಚೊತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ರಾಷ್ಟ್ರೀಯ ಪರಿವಾಹನ ಮೂಲಕ ಮಾಲೀಕರ ಹೆಸರು, ವಿಳಾಸ ಸಂಗ್ರಹಿಸಿ ಬಸ್ ದಾಖಲೆ ಒದಗಿಸುವಂತೆ ನೋಟಿಸ್ ನೀಡಿದ್ದರೂ ಉತ್ತರ ಕೊಟ್ಟಿಲ್ಲ. ಫೆ.12ರಂದು ರೇಸ್ಕೋರ್ಸ್ ರಸ್ತೆಯಲ್ಲಿ ಹಿರಿಯ ಇನ್ಸ್ಪೆಕ್ಟರ್ ರಾಜಣ್ಣ ಅವರು ಇದೇ ಟ್ರಾವೆಲ್ಸ್ನ ಇನ್ನೊಂದು ಬಸ್ ಜಪ್ತಿ ಮಾಡಿದ್ದರು. ಎರಡೂ ಬಸ್ಗಳು ತೆರಿಗೆ ಪಾವತಿಸದಿರುವುದು ದೃಢಪಟ್ಟಿತ್ತು. ಇದೇ ವೇಳೆ ಇಂಜಿನ್ ನಂಬರ್ ಹಾಗೂ ಚಾಸ್ಸಿ ನಂಬರ್ ಅಸಲಿತನದ ಕುರಿತು ಅನುಮಾನ ವ್ಯಕ್ತವಾಗಿತ್ತು.
ನಕಲು ದೃಢಪಡಿಸಿದ ಕಂಪನಿ: ಎರಡೂ ಬಸ್ಗಳು 2017ರಲ್ಲಿ ಜೋಧಪುರದಲ್ಲಿ ನೋಂದಣಿಯಾಗಿವೆ. ಇಂಜಿನ್ ನಂಬರ್ ಹಾಗೂ ಚಾಸ್ಸಿ ನಂಬರ್ ಅಸಲಿತನವನ್ನು ದೃಢಪಡಿಸು ವಂತೆ ತಯಾರಕ ಕಂಪನಿಯಾದ ಅಶೋಕ ಲೇಲೆಂಡ್ಗೆ ಕಳುಹಿಸಿದ್ದರು. ಇಂಜಿನ್ ನಂಬರ್ ಅಸಲಿಯಾಗಿದೆ. ಆದರೆ, ಚಾಸ್ಸಿ ನಂಬರನ್ನು ತಿರುಚಲಾಗಿದೆ ಎಂದು ಕಂಪನಿ ವರದಿ ಕೊಟ್ಟಿದೆ. ತೆರಿಗೆ ಪಾವತಿಸುವಂತೆ ಕೊಟ್ಟ ನೋಟಿಸನ್ನು ಮಾಲೀಕ ಸ್ವೀಕರಿಸಿದ್ದು, 2ನೇ ನೋಟಿಸ್ ಪಡೆದಿಲ್ಲ. ರಾಜಸ್ಥಾನದಲ್ಲೂ ತೆರಿಗೆ ಕಟ್ಟದೆ ಸಂಚರಿಸುತ್ತಿದ್ದ ವಿಚಾರ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ಲಕ್ಷ ರೂ. ಡೀಲ್ಗೆ ಬಂದಿದ್ದ ಏಜೆಂಟ್!: ಜಪ್ತಿ ಮಾಡಿರುವ ಬಸ್ಗಳಿಗೆ 3 ತಿಂಗಳ ತೆರಿಗೆ ಪಾವತಿಸಲಾಗುತ್ತದೆ. ಜತೆಗೆ ಪ್ರತಿ ಬಸ್ಗೂ 2 ಲಕ್ಷ ರೂ. ನಿಮಗೆ ಕೊಡಿಸುತ್ತೇನೆ ಪ್ರಕರಣ ದಾಖಲಿಸದೆ ಬಿಟ್ಟುಬಿಡುವಂತೆ ಏಜೆಂಟ್ ಒಬ್ಬ ಡೀಲ್ ಕುದುರಿಸಲು ಬಂದಿದ್ದ. ಈಗಾಗಲೇ ಕೇಸ್ ದಾಖಲಾಗಿದೆ. ಮಾಲೀಕ ಬಂದು ದಾಖಲೆ ಒದಗಿಸುವಂತೆ ಎಚ್ಚರಿಕೆ ಕೊಟ್ಟು ಕಳುಹಿಸಲಾಯಿತು. ನಂತರವೂ ಪದೇಪದೆ ಕರೆ ಮಾಡುತ್ತಿದ್ದ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದೇ ನಂಬರಲ್ಲಿ ಹಲವು ವಾಹನ
ಒಂದೇ ರಿಜಿಸ್ಟ್ರೇಷನ್, ಒಂದೇ ಇನ್ಸುರೆನ್ಸ್ ಮತ್ತು ಒಂದೇ ತೆರಿಗೆ ಪಾವತಿ ದಾಖಲಾತಿಗಳನ್ನಿಟ್ಟುಕೊಂಡು 2 ಅಥವಾ 3 ವಾಹನಗಳನ್ನು ಸಂಚರಿಸುವ ಮೂಲಕ ತೆರಿಗೆ ವಂಚನೆ ಮಾಡಲಾಗುತ್ತದೆ. ಇಂಜಿನ್ ನಂಬರ್ ಒರಿಜಿನಲ್ ಇದ್ದರೂ ಚಾಸ್ಸಿ ನಂಬರನ್ನು ಮಾತ್ರ ನಕಲು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.