

ಶಿವಮೊಗ್ಗ: ನಾವು ಅರಿವಿದ್ದೋ, ಅರಿಯದೆಯೋ ಮಾಡಿದ ಪಾಪ ಕರ್ಮಗಳು ದೂರವಾಗಬೇಕಾದರೆ ದಾನಗಳನ್ನು ಮಾಡಲೇಬೇಕು. ಅನ್ನದಾನ ಶ್ರೇಷ್ಠದಾನ ಎಂದು ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಹೇಳಿದರು.
ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ನಗರ ಘಟಕದಿಂದ ಹಮ್ಮಿಕೊಂಡಿರುವ ಮುಷ್ಟಿ ಅಕ್ಕಿ ಹಾಗೂ ಇತರೆ ಸಾಮಗ್ರಿಗಳ ಸಂಗ್ರಹ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಈ ಅಭಿಯಾನ ಅತ್ಯಂತ ಪವಿತ್ರವಾದುದು. ಶಬರಿಮಲೈಗೆ ತೆರಳುವ ಭಕ್ತರ ಅನ್ನದಾನಕ್ಕಾಗಿ ಮುಷ್ಟಿ ಅಕ್ಕಿ ಸಂಗ್ರಹಿಸುತ್ತಿರುವುದು ಪುಣ್ಯದ ಕೆಲಸ ಎಂದರು.
ಅಕ್ಕಿಯ ದಾನ ವಿವಿಧೆಡೆ ವಿವಿಧ ರೂಪ ತೆಗೆದುಕೊಳ್ಳುತ್ತದೆ. ದೇವಾಲಯಗಳಲ್ಲಿ ಪ್ರಸಾದ ಎಂದೆನಿಸುತ್ತದೆ. ಅಕ್ಕಿಗೆ ಅರಿಶಿಣ ಬೆರೆಸಿದರೆ ಅದು ಅಕ್ಷತೆಯಾಗುತ್ತದೆ. ನಾನಾ ರೂಪಗಳಲ್ಲಿ ಅಕ್ಕಿಯನ್ನು ಬಳಸುತ್ತಾರೆ. ಸನಾತನ ಸಂಸ್ಕೃತಿಯಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಹಸಿವನ್ನು ನೀಗಿಸುವುದು ಶ್ರೇಷ್ಠ ಕಾರ್ಯ ಎಂದು ಅಭಿಪ್ರಾಯಪಟ್ಟರು.
ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಅಧ್ಯಕ್ಷ ಕೆ.ಇ.ಕಾಂತೇಶ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಶಬರಿಮಲೈ ಭಕ್ತರಿಗೆ ಯಾವುದೇ ಕೊರತೆ ಆಗಬಾರದು ಎಂಬ ದೃಷ್ಟಿಯಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಮೇಯರ್ ಸುವರ್ಣಾ ಶಂಕರ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಮಂಜುನಾಥ್, ಸಂತೋಷ್, ಶಿವಕುಮಾರ್, ಜಾಧವ್, ಅನಿತಾ ಮುಂತಾದವರಿದ್ದರು.