

ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಆರೋಪಿ ಶಾರೀಕ್ ಸೇರಿ ನಾಲ್ವರ ವಿರುದ್ಧ ಕೋರ್ಟ್‌ಗೆ ದೋಷರೋಪಣೆ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಒಂದು ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಅನ್ನು ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಪ್ರಮುಖ ಆರೋಪಿ ಶಾರಿಕ್, ಮಾಜ್ ಮುನೀರ್, ಯಾಸೀನ್, ಅರಾಫತ್ ಹೇಳಿಕೆಗಳನ್ನು ಎನ್‌ಐಎ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿಕೊಂಡಿದ್ದಾರೆ.
ಸ್ಫೋಟಕ್ಕೆ ಎಲ್ಲೆಲ್ಲಿ ಸಂಚು ರೂಪಿಸಲಾಗಿತ್ತು, ತರಬೇತಿ ಎಲ್ಲಿ ನಡೆಸಲಾಗಿತ್ತು. ಯಾರೆಲ್ಲಾ ಕೃತ್ಯದಲ್ಲಿ ಇದ್ದರು ಎಂಬುದರ ಬಗ್ಗೆ ಉಲ್ಲೇಖಿಸಲಾಗಿದೆ. ಸ್ಥಳ ಮಹಜರು ವೇಳೆ ತರಬೇತಿ ಪಡೆದಿದ್ದ ತುಂಗಾ ನದಿ ತೀರದ ಸ್ಥಳವನ್ನು ಶಾರೀಕ್ ಈಗಾಗಲೇ ತೋರಿಸಿದ್ದಾನೆ.
ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ ಅಂಶಗಳು:
ಕದ್ರಿ ದೇವಸ್ಥಾನ ಸ್ಫೋಟಕ್ಕೆ ಎಲ್ಲೆಲ್ಲಿ ಯೋಜನೆ ಹಾಕಿಕೊಳ್ಳಲಾಗಿತ್ತು, ತರಬೇತಿ ಎಲ್ಲಿ ನಡೆಸಲಾಗಿತ್ತು, ಯಾರೆಲ್ಲರೂ ತಂಡದಲ್ಲಿದ್ದರು, ಕದ್ರಿ ದೇವಸ್ಥಾನ ಸ್ಫೋಟದ ಬಳಿಕ ಉಡುಪಿ ಕೃಷ್ಣಾಮಠ, ಚಿಕ್ಕಮಗಳೂರು ಬಿಜೆಪಿ ಕಚೇರಿ ಸ್ಫೋಟ ಹೊಣೆಯೂ ಇದೇ ಶಾರಿಕ್ ವಹಿಸಿದ್ದ. ಇದರ ಜತೆಗೆ ಕೆಲ ಮಠಗಳನ್ನು ಗುರಿಯಾಗಿಸಿಕೊಂಡಿದ್ದು, ಅವುಗಳ ಸ್ಫೋಟಕ್ಕೂ ಸಂಚು ರೂಪಿಸಿದ್ದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಜತೆಗೆ, ಆರು ತಿಂಗಳ ಕಾಲ ನಿರಂತರವಾಗಿ ತರಬೇತಿ ಪಡೆದ ಬಗ್ಗೆಯೂ ಮಾಹಿತಿ ಇದರಲ್ಲಿದೆ.
ಅಲ್ಲದೆ, ವಿದೇಶಿ ಹ್ಯಾಂಡ್ಲರ್‌ಗಳ ಬಗ್ಗೆಯೂ ಸ್ಫೋಟಕ ವಿಚಾರಗಳನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಸ್ಫೋಟಕಗಳನ್ನು ಖರೀದಿಗೆ ವಿದೇಶದಿಂದ ಹಣ ಸಾಕಷ್ಟು ಹಣ ಬರುತ್ತಿತ್ತು. ಇದೇ ಹಣದಿಂದ ಆರೋಪಿಗಳು ಸ್ಫೋಟಕಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಜತೆಗೆ ಇವರ ಖರ್ಚು ವೆಚ್ಚಗಳನ್ನು ಹ್ಯಾಂಡ್ಲರ್‌ಗಳೇ ನೋಡಿಕೊಳ್ಳುತ್ತಿದ್ದರು ಎಂಬುದು ಉಲ್ಲೇಖವಾಗಿದೆ. ಅಷ್ಟೇ ಅಲ್ಲದೆ, ವಿದೇಶದಿಂದ ಯಾವೆಲ್ಲ ಖಾತೆಗಳಿಂದ ಹಣ ಬಂದಿದೆ, ಯಾವ ಅಕೌಂಟ್‌ಗಳಿಗೆ ಬಂದಿದೆ ಎಂಬ ದಾಖಲೆಗಳ ಜತೆಗೆ ಭಟ್ಕಳ್ ಗ್ಯಾಂಗ್ ಮೀರಿಸುವಷ್ಟು ನೆಟ್‌ವರ್ಕ್ ಬೆಳೆಸಲು ಯೋಜನೆ ರೂಪಿಸಿದ್ದರ ಬಗ್ಗೆಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.