

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿಯನ್ನು ದೆಹಲಿಯ ಬಿಜೆಪಿ ಹೈಕಮಾಂಡ್ ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತೀ ಶೀಘ್ರದಲ್ಲೇ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಉಪಚುನಾವಣೆ ಪ್ರಕಟವಾಗುತ್ತದೆ. ಆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡಬೇಕು. ಅಲ್ಲಿನ ಕಾರ್ಯಕರ್ತರ ಬಯಕೆಯಂತೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಚನ್ನಪಟ್ಟಣ ತಾಲೂಕು ಜೆಡಿಎಸ್ ಭದ್ರಕೋಟೆ. ಈ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧೆ ಮಾಡಿದರೂ 55 ರಿಂದ 60 ಸಾವಿರ ಜೆಡಿಎಸ್ ಮತಗಳು ಬರುತ್ತವೆ. ಒಂದು ಕಡೆ ಜೆಡಿಎಸ್ ಶಕ್ತಿ ಮತ್ತೊಂದು ಕಡೆ ಸಿ.ಪಿ ಯೋಗೇಶ್ವರ ಅವರ ವೈಯಕ್ತಿಕ ವರ್ಚಸ್ಸು ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ಕಾಂಗ್ರೆಸ್‌ಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ನೆಲೆಯೇ ಇಲ್ಲ ಎಂದರು.
ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಅವರ ನಾಯಕತ್ವದ ಶಕ್ತಿ ಹಳೆ ಮೈಸೂರು ಪ್ರಾಂತ್ಯ ಅಲ್ಲ, ಉತ್ತರ ಕರ್ನಾಟಕದಲ್ಲಿಯೂ ವೃದ್ಧಿಸಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಹೊಂದಾಣಿಕೆಯಿಂದ ದುಡಿದಿದ್ದಾರೆ. ಇವೆಲ್ಲ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರನ್ನು ಯಾವ ರೀತಿ ಕಟ್ಟಿ ಹಾಕಬೇಕು ಎಂದು ಆಲೋಚಿಸುತ್ತಿದ್ದಾರೆ ಎಂದು ಹೇಳಿದರು.
ಗಣಿಗಾರಿಕೆ ಪ್ರಕರಣ ಸುಪ್ರೀಂಕೋರ್ಟ್ ಅಂಗಳಕ್ಕೆ ಹೋಗಿ 7 ವರ್ಷವಾಗಿದೆ. ಸುಪ್ರೀಂ ಕೋರ್ಟ್ ಮೂರು ತಿಂಗಳಲ್ಲಿ ತನಿಖಾ ವರದಿ ಕೊಡುವಂತೆ ಕೇಳಿದೆ. ಈವರೆಗೂ ಕೊಟ್ಟಿಲ್ಲ. ಈಗ ಮುಡಾ ಕೇಸ್ ಮುಚ್ಚಿ ಹಾಕಲು ಕುಮಾರಸ್ವಾಮಿ ಪ್ರಾಸಿಕ್ಯೂಷನ್ ವಿಚಾರ ಎತ್ತಿದ್ದಾರೆ ಎಂದು ಹರಿಹಾಯ್ದರು.
ಸಿಎಂ ಪತ್ನಿ ವಿಜಯನಗರದಲ್ಲಿ ಸೈಟ್ ಪತ್ರ ಬಿಡುಗಡೆ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಿಮ್ಮ ಕಣ್ಣ ಮುಂದೆ ಇದೆ. ಆ ಪತ್ರದಲ್ಲಿ ಏನು ಬರೆದಿದ್ದಾರೆ? 40:60 ನಿವೇಶನ ನಮಗೆ ಬೇಡ ಇಂತಹ ಜಾಗ ಬೇಕು ಎಂದು ವೈಟ್ನರ್ ಹಾಕಿ ಅಳಿಸಿ ಹಾಕಿದ್ದಾರೆ. ಅದರಲ್ಲಿ ಏನು ಬರೆದಿದ್ದರು? ಬದಲಿ ಜಾಗ ಎಲ್ಲಿ ಕೇಳಿದ್ದರು? ಎಂಬುದನ್ನು ತಿರುಚಲು ತಂತ್ರಗಾರಿಕೆ ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
ಕುಮಾರಸ್ವಾಮಿಯವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು ಜನರನ್ನ ದಿಕ್ಕು ತಪ್ಪಿಸುವ ಕೆಲಸ ಅಷ್ಟೇ. ಇದರಿಂದ ಕುಮಾರಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮಾಡುವ ಪ್ರಯತ್ನ ಫಲ ನೀಡುವುದಿಲ್ಲ. ಗಣಿಗಾರಿಕೆಗೆ ಅನುಮತಿ ನೀಡಿ ಕುಮಾರಸ್ವಾಮಿ ಸಹಿ ಹಾಕಿಲ್ಲ. ಇದು ಮುಡಾ ಹಗರಣವನ್ನು ಮುಚ್ಚಿ ಹಾಕಲು ಮಾಡಿರುವ ಯೋಜನೆಯಷ್ಟೇ.
-ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ.