

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚನ್ನಕಲ್ ಕಾವಲು ವ್ಯಾಪ್ತಿಯಲ್ಲಿ 119 ಮಿ.ಮೀ. ಮಳೆಯಾಗಿದ್ದು, ದಾಖಲೆ ನಿರ್ಮಿಸಿದೆ.
ಹತ್ತು ದಿನಗಳಿಂದ ಪಿರಿಯಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಸಂಜೆಯಾಗುತ್ತಲೇ ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಗುಡುಗು ಗಾಳಿ ಸಹಿತ ಜೋರು ಮಳೆ ಬರುತ್ತಿದೆ. ಅದರಲ್ಲೂ ಮೂರು ದಿನಗಳಿಂದ ಮತ್ತಷ್ಟು ಮಳೆಯ ಪ್ರಮಾಣ ಹೆಚ್ಚಾಗಿದೆ. ಪಿರಿಯಾಪಟ್ಟಣ ತಾಲೂಕಿನ ಚನ್ನಕಲ್ ಕಾವಲ್ ವ್ಯಾಪ್ತಿಯಲ್ಲಿ 119 ಮಿ.ಮೀ. ಚಿಕ್ಕನೇರಳೆ ವ್ಯಾಪ್ತಿಯಲ್ಲಿ 102.5 ಮಿ.ಮೀ. ಮತ್ತು ಆಲನಹಳ್ಳಿ ವ್ಯಾಪ್ತಿಯಲ್ಲಿ 102 ಮಿ.ಮೀ. ಮಳೆಯ ದಾಖಲೆ ನಿರ್ಮಿಸಿದೆ. ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬಿದ್ದಂತಹ ಪ್ರದೇಶ ಇವುಗಳಾಗಿದ್ದು, ಸೋಮವಾರವೂ ಮಳೆ ಮುಂದುವರಿದು ಅವಾಂತರ ಸೃಷ್ಟಿಸಿತು.
ಮೊದಲ ಒಂದೆರಡು ದಿನ ಮಳೆ ಸುರಿದು ಭೂಮಿ ಹದವಾದ ಹಿನ್ನೆಲೆ ವ್ಯಾಪ್ತಿಯ ರೈತರು ತಂಬಾಕು ಸಸಿ ನಾಟಿ ಮಾಡಿದ್ದರು. ಆದರೆ ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ರೈತರ ಜಮೀನುಗಳು ಕೆರೆಯಂತಾಗಿವೆ. ಇದರಿಂದ ನಾಟಿ ಮಾಡಿದ ತಂಬಾಕು ಸಸಿಗಳು ಸೇರಿದಂತೆ ಶುಂಠಿ ಇನ್ನಿತರ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ನಾಶವಾಗಿದೆ.