

ನವದೆಹಲಿ: ಭಾರತೀಯರ ಹೊಸ ವರ್ಷ ಯುಗಾದಿ ಬೆನ್ನಲ್ಲೇ, ನೂತನ ಆರ್ಥಿಕ ವರ್ಷ ಏ.1 ರಿಂದ ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುವ ಹಲವಾರು ಬದಲಾವಣೆಗಳು ಜಾರಿಗೆ ಬರಲಿವೆ. ಜನರ ಖರ್ಚುವೆಚ್ಚಕ್ಕೆ ಸಂಬಂಧಿಸಿದ ಹಲವು ಏರಿಕೆ- ಇಳಿಕೆಗಳು, ರಿಯಾಯ್ತಿ, ವಿನಾಯ್ತಿಗಳು, ನಿಯಮ- ನಿಬಂಧನೆಗಳು, ಹೊಸ ಪದ್ಧತಿಗಳ ಕುರಿತ ಪಕ್ಷಿನೋಟವನ್ನು ಓದುಗರ ಮಾಹಿತಿಗಾಗಿ ನೀಡಲಾಗಿದೆ.
ಹೊಸ ತೆರಿಗೆ ಸ್ಲ್ಯಾಬ್ಗಳು: ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್ಗಳು ಏ. 1ರಿಂದ ಜಾರಿಗೆ ಬರಲಿದ್ದು ವಾರ್ಷಿಕ 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ವೇತನದಾರರು 75 ಸಾವಿರ ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ಗೆ ಅರ್ಹರಾಗಲಿದ್ದಾರೆ. 12.75 ಲಕ್ಷ ರೂ.ವರೆಗಿನ ಆದಾಯ ತೆರಿಗೆಮುಕ್ತ. ಇದು ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳುವವರಿಗೆ ಅನ್ವಯ. ಹಳೇ ತೆರಿಗೆ ಪದ್ಧತಿಯಲ್ಲಿ ಹಲವು ವಿನಾಯ್ತಿಗಳು ಮತ್ತು ಕಡಿತಗಳು ಇರುವುದರಿಂದ ಕೆಲವರು ಹಳೆಯದನ್ನೇ ಆಯ್ಕೆ ಮಾಡಿಕೊಳ್ಳಬಹುದು.
ಹಿರಿಯ ನಾಗರಿಕರಿಗೆ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಮಿತಿಯನ್ನು ದ್ವಿಗುಣಗೊಳಿಸಿ 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಬಾಡಿಗೆ ಆದಾಯದ ಮೇಲಿನ ವಿನಾಯ್ತಿ ಮಿತಿಯನ್ನು ವಾರ್ಷಿಕ 6 ಲಕ್ಷ ರೂ.ಗೆ ಏರಿಸಲಾಗಿದೆ.
ಹಾಲಿನ ದರ ಏರಿಕೆ: ಪ್ರತಿ ಲೀಟರ್ ಹಾಲು ಮೊಸರಿನ ಮೇಲೆ ದರ ಏರಿಕೆಯಾಗಲಿದೆ. ಹಾಲಿನ ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲಾಗುತ್ತದೆ. ಮೊಸರಿನ ಹಣದ ಬಗ್ಗೆ ಸ್ಪಷ್ಟತೆ ಇಲ್ಲ.
ವಿದ್ಯುತ್ ದರ ಏರಿಕೆ: ಮೀಟರ್ ಮೇಲಿನ ಫಿಕ್ಸೆಡ್ ಚಾರ್ಜ್ ಏರಿಕೆಯಾಗುತ್ತಿದೆ. ಎಸ್ಕಾಂಗಳ ಆದಾಯ- ವೆಚ್ಚ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಗ್ಯಾರಂಟಿ ಫಲಾನುಭವಿಗಳಿಗೆ ಚಿಂತೆ ಇಲ್ಲ.
ಮಾರ್ಗಸೂಚಿ ದರ: ಜಿಐಎಸ್ ಆಧಾರದಲ್ಲಿ ಆಸ್ತಿ ಮೇಲಿನ ಮಾರ್ಗಸೂಚಿದರ ನಿಗದಿ ಮಾಡುವ ವ್ಯವಸ್ಥೆ ಪ್ರಾಯೋಗಿಕವಾಗಿ ಏಪ್ರಿಲ್ನಲ್ಲಿ ಜಾರಿಗೆ ಬರಲಿದೆ. ಇದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲವಾಗಿದೆ.