

ಶಿವಮೊಗ್ಗ: ಸದೃಢ ರಾಷ್ಟ್ರ ನಿರ್ಮಾಣಕ್ಕೆ ನಾವು ಮುಖ್ಯವಾಗಿ ಹೃದಯಗಳನ್ನು ಕಾಪಾಡಿಕೊಳ್ಳಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ವೈದ್ಯ ನರೇಂದ್ರ ಜಿ. ನಿಶಾನಿಮಠ ಹೇಳಿದರು.
ಪಿಇಎಸ್ ಪಬ್ಲಿಕ್ ಶಾಲೆ ಆವರಣದ ಅಟಲ್ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘ ಶಿಕ್ಷಾ ವರ್ಗದ ಸಮಾರೋಪದಲ್ಲಿ ಮಾತನಾಡಿದ ಅವರು, ಈ ಹಿಂದೆ ಜನರು ಉತ್ತಮ ಆಹಾರ ಸೇವಿಸುತ್ತಿದ್ದುದರಿಂದ ದೀರ್ಘಕಾಲ ಆರೋಗ್ಯವಂತರಾಗಿ ಬಾಳುತ್ತಿದ್ದರು ಎಂದರು.
ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗಿರುವುದರಿಂದ 40ರಿಂದ 45 ವರ್ಷದ ಜನರಿಗೆ ಹೃದಯಾಘಾತ ಆಗುತ್ತಿದೆ. 32 ವರ್ಷದ ಯುವಕನಿಗೆ ಇತ್ತೀಚೆಗೆ ನಾನೇ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಪಾಲಕರು ಚಿಕ್ಕ ಮಕ್ಕಳಿಗೂ ಜಂಕ್‌ಫುಡ್ ಕೊಡಿಸುತ್ತಿದ್ದಾರೆ. ಇದು ತುಂಬ ಅಪಾಯಕಾರಿ ಎಂದು ಸಲಹೆ ನೀಡಿದರು.
ನಾನು ಶಾಲಾ ದಿನಗಳಲ್ಲಿ ದಾವಣಗೆರೆಯಲ್ಲಿ ಸಂಘದ ಶಾಖೆ ನೋಡುತ್ತಿದ್ದೆ. ಅದು ನನಗೆ ಸಂಘದ ಬಗ್ಗೆ ಅಭಿಮಾನ ಹೊಂದುವಂತೆ ಮಾಡಿತು. ಧ್ಯೇಯ, ನಿಸ್ವಾರ್ಥ ಸೇವೆ ಮತ್ತು ಶಿಸ್ತಿಗೆ ಸಂಘ ಹೆಸರುವಾಸಿ. ಧೈರ್ಯ, ಶಿಸ್ತಿನ ತಳಹದಿ ಮೇಲೆ ದೇಶ ನಿರ್ಮಾಣ ಮಾಡಬಹುದು ಎಂಬುದು ಆರ್‌ಎಸ್‌ಎಸ್ ಧ್ಯೇಯ. ಈ ಕಾರಣಕ್ಕಾಗಿ ಸಂಘ ಬೃಹದಾಕಾರವಾಗಿ ಬೆಳೆದಿದೆ ಎಂದರು.
ಶಿಬಿರದ ವರ್ಗಾಧಿಕಾರಿ ಗೋವಿಂದರಾಜು ಮಾತನಾಡಿ, ಕಾರ್ಯಕರ್ತರ ನಿರ್ಮಿತಿಗಾಗಿ ಏ.11ರಿಂದ ಶಿಬಿರ ಸಂಘಟಿಸಲಾಗಿತ್ತು. ಕರ್ನಾಟಕ ದಕ್ಷಿಣ ಪ್ರಾಂತದ 8 ವಿಭಾಗಗಳ ಪ್ರಶಿಕ್ಷಣಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ದಕ್ಷಿಣ ಪ್ರಾಂತ ಸಂಘ ಚಾಲಕ ಉಮಾಪತಿ, ಮಧುಕರ ಮತ್ತೂರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿವಿಧ ಶಾರೀರಿಕ ಪ್ರದರ್ಶನ, ಆಟೋಟ, ಯೋಗ, ದಂಡ ಪ್ರದರ್ಶನವನ್ನು ಪ್ರಶಿಕ್ಷಣಾರ್ಥಿಗಳು ನೀಡಿದರು. ಆರ್‌ಎಸ್‌ಎಸ್‌ನ ಗ್ರಾಮ ವಿಕಾಸ ಗತಿವಿಧಿ ಅಖಿಲ ಭಾರತೀಯ ಸಂಯೋಜಕ ಗುರುರಾಜ ವಕ್ತಾರರಾಗಿ ಪಾಲ್ಗೊಂಡಿದ್ದರು.