

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬಳಿಕ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವುದು, ಈ ಕುರಿತು ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಕೆಲಸ ಮಾಡುವವರಿಗೆ ಅವಕಾಶ ಸಿಗಬೇಕು, ಬೇರೆಯವರಿಗೂ ದಾರಿ ಮಾಡಿಕೊಡಬೇಕು. ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆಗಿದ್ದ ಅವಧಿಯಲ್ಲಿ ಬದಲಾವಣೆಗಳಾಗಿದ್ದವು. ನನ್ನನ್ನೂ ಕೈಬಿಟ್ಟು ಬೇರೆಯವರಿಗೆ ಅವಕಾಶ ಮಾಡಿ ಕೊಟ್ಟಿದ್ದರು ಎಂದು ನೆನಪಿಸಿದರು.
ಅದೇ ರೀತಿ ಸಾಧ್ಯತೆಗಳಿದ್ದರೂ ಇರುತ್ತವೆ. ಅಧಿಕಾರ ಹಂಚಿಕೆ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಎಲ್ಲರನ್ನೂ ಸಚಿವರನ್ನಾಗಿ ಮಾಡಲಾಗದು. ಕೆಲವರು ಹೆಚ್ಚು ಅನುದಾನ ನಿರೀಕ್ಷಿಸಿ ಸರ್ಕಾರವನ್ನು ಟೀಕಿಸುತ್ತಿರಬಹುದು.
ಬಜೆಟ್‌ನಲ್ಲಿ ಕಾದಿಟ್ಟ ಅನುದಾನ ಕಡಿಮೆ ಎಂದು ಅನಿಸಿರಬಹುದು. ಆದರೆ ಸಚಿವ ಸಂಪುಟದ ಎಲ್ಲ ಸದಸ್ಯರು ಎಲ್ಲ ಹಂತಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಸಮರ್ಥನೆ ನೀಡಿದರು.
ಒಂದು ಸಮುದಾಯ ಹೆಚ್ಚು, ಮತ್ತೊಂದು ಸಮುದಾಯ ಕಡಿಮೆ ಮತ ಹಾಕಿದೆ ಎಂದು ಪ್ರತ್ಯೇಕಿಸಿ ನೋಡುವುದು ಅಸಾಧ್ಯ. ಸರ್ಕಾರಕ್ಕೆ ಎಲ್ಲರೂ ಸಮಾನರು, ವೋಟು ಹಾಕಿದವರು ಹಾಗೂ ಹಾಕದ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.
ರಾಜ್ಯದ ಸಮಗ್ರ, ಸಮಾನ ಅಭಿವೃದ್ಧಿಯನ್ನು ಸರ್ಕಾರ ಬಯಸುತ್ತದೆ. ಆಡಳಿತ, ಪ್ರತಿಪಕ್ಷದ ಶಾಸಕರ ಕ್ಷೇತ್ರವೆಂಬ ತಾರತಮ್ಯ ಮಾಡುವುದಿಲ್ಲ. ಈ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದು, ಹಿರಿಯರಾದ ಶಾಮನೂರು ಶಿವಶಂಕರಪ್ಪ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿಯನ್ನು ರಾವಣನಂತೆ ಬಿಜೆಪಿ ಬಿಂಬಿಸಿರುವುದು ಅವರ ಸಂಸ್ಕೃತಿ ಪ್ರತಿಬಿಂಬಿಸುತ್ತದೆ. ವಿರೋಧ ಪಕ್ಷದ ನಾಯಕರನ್ನು ಅಧಿಕೃತ ಸಂದೇಶದ ಮೂಲಕ ತೋರಿಸಿರುವುದು ಕೀಳು ಅಭಿರುಚಿಯಾಗಿದೆ ಎಂದು ದಿನೇಶ್ ಗುಂಡೂರಾವ್ ಖಂಡಿಸಿದರು.