ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ : ಸಿದ್ದರಾಮಯ್ಯ

Siddaramaiah
Published on

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪುಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ 2023-24ನೇ ಸಾಲಿನಿಂದಲೇ ಬದಲಾವಣೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ, 43 ಮಂದಿ ಪುರಸ್ಕೃತ ಶಿಕ್ಷಕರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಹಾಲಿ ಪರೀಕ್ಷಾ ಪದ್ಧತಿಯಲ್ಲಿ ವಿದ್ಯಾರ್ತಿಗಳಿಗೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆ ನಡೆಸಷಲಾಗುತ್ತದೆ. ಈ ಪದ್ಧತಿ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ತರುತ್ತದೆ. ಆದ್ದರಿಂದ ವಾರ್ಷಿಕ ಪರೀಕ್ಷೆ 1,2 ಮತ್ತು 3 ಎಂದು ಹೆಸರಿಸಿ ಮೂರು ಅವಕಾಶ ಒದಗಿಸುವ ಮೂಲಕ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಉತ್ತೇಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ರೈತರು, ಸೈನಿಕರು, ಶಿಕ್ಷಕರು ಆದರ್ಶ:

ವಿದ್ಯೆ ಕಲಿಸುವುದಷ್ಟೆ ಶಿಕ್ಷಣದ ಉದ್ದೇಶ ಅಲ್ಲ. ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದೂ ಶಿಕ್ಷಣದ ಗುರಿ. ರೈತರು, ಸೈನಿಕರು, ಶಿಕ್ಷಕರು ಆದರ್ಶ ಸಮಾಜದ ಆಧಾರ ಸ್ತಂಭಗಳು. ಇವರು ಸಮಾಜದ, ದೇಶದ ಭವಿಷ್ಯ ರೂಪಿಸುವ ಕಾಯಕ ಜೀವಿಗಳು ಎಂದು ಹೇಳಿದರು.

ಡಿಗ್ರಿ ಪಡೆದು, ಡಾಕ್ಟರೇಟ್ ಪಡೆದರೂ ಅವರಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಯದಿದ್ದರೆ, ತಲೆಯೊಳಗೆ ಮೌಢ್ಯ ತುಂಬಿಕೊಂಡಿದ್ದರೆ ಅವರನ್ನು ಸುಶಿಕ್ಷಿತರು ಎಂದು ಕರೆಯಲು ಸಾಧ್ಯವಿಲ್ಲ. ಡಿಗ್ರಿ ಪಡೆದವರೇ ಹೆಚ್ಚೆಚ್ಚು ಜಾತಿವಾದಿಗಳಾದರೆ ಶಿಕ್ಷಣ ಪಡೆದು ಏನು ಪ್ರಯೋಜನ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net