ಚಂದ್ರನಲ್ಲಿ ವಿಕ್ರಮ್​ ಲ್ಯಾಂಡರ್​ ಇಳಿದ ಜಾಗಕ್ಕೆ 'ಶಿವಶಕ್ತಿ' ಎಂದು ನಾಮಕರಣ: ಪ್ರಧಾನಿ ಮೋದಿ ಘೋಷಣೆ

Chandrayaan 3 Landing
Published on

ಬೆಂಗಳೂರು: ಚಂದ್ರಯಾನ-3 ನೌಕೆಯ ವಿಕ್ರಮ್​ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು ಇನ್ನು ಮುಂದೆ 'ಶಿವಶಕ್ತಿ' ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು.

ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿ, ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ಮಾತನಾಡಿದರು.

ಭಾರತವು ಇಂದು ಚಂದ್ರನ ಮೇಲಿದೆ. ನಮ್ಮ ರಾಷ್ಟ್ರೀಯ ಹೆಮ್ಮೆಯನ್ನು ನಾವು ಚಂದ್ರನ ಮೇಲೆ ಇರಿಸಿದ್ದೇವೆ. ಚಂದ್ರಯಾನ 3 ಮಿಷನ್‌ನ ಯಶಸ್ಸು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಇತಿಹಾಸದಲ್ಲಿ ಅಸಾಧಾರಣ ಕ್ಷಣವಾಗಿದೆ. ಬಾಹ್ಯಾಕಾಶಕ್ಕೆ 40 ದಿನಗಳ ಪ್ರಯಾಣದ ನಂತರ ಚಂದ್ರಯಾನ-3 ನೌಕೆಯ ವಿಕ್ರಮ್​ ಲ್ಯಾಂಡರ್ ಬುಧವಾರ ಸಂಜೆ ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟಿತು. ಈ ಪ್ರದೇಶಕ್ಕೆ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ಭಾರತ ಗಳಿಸಿತು ಎಂದರು.

ವಿಕ್ರಮ್​ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು ಇನ್ನು ಮುಂದೆ 'ಶಿವಶಕ್ತಿ' ಎಂದು ಕರೆಯಲಾಗುವುದು ಮತ್ತು ಚಂದ್ರಯಾನ-2 ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಚಂದ್ರನ ಮೇಲ್ಮೈಯಲ್ಲಿರುವ ಜಾಗವನ್ನು 'ತಿರಂಗಾ' ಎಂದು ಕರೆಯಲಾಗುವುದು. ಇದು ಭಾರತದ ಪ್ರತಿಯೊಂದು ಪ್ರಯತ್ನಕ್ಕೂ ಸ್ಫೂರ್ತಿಯಾಗಲಿದೆ. ಯಾವುದೇ ವೈಫಲ್ಯವು ಅಂತಿಮವಲ್ಲ ಎಂದು ನಮಗೆ ನೆನಪಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂದು ನಾನು ವಿಭಿನ್ನ ರೀತಿಯ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಇಂತಹ ಸಂದರ್ಭಗಳು ತುಂಬಾ ಅಪರೂಪ. ಈ ಬಾರಿಯ ಚಂದ್ರಯಾನ ಲ್ಯಾಂಡಿಂಗ್​ ಸಮಯದಲ್ಲಿ ನಾನು ತುಂಬಾ ಚಂಚಲನಾಗಿದ್ದೆ. ಏಕೆಂದರೆ, ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ ಆದರೆ, ನನ್ನ ಮನಸ್ಸು ಮಾತ್ರ ನಿಮ್ಮೊಂದಿಗೆ ಇತ್ತು ಎಂದು ಪ್ರಧಾನಿ ಮೋದಿ ಹೇಳಿದರು.

ನಾನು ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗಲು ಬಯಸುತ್ತಿದ್ದೆ ಮತ್ತು ನಿಮಗೆ ವಂದಿಸುತ್ತೇನೆ. ನಿಮ್ಮ ಪ್ರಯತ್ನಗಳಿಗೆ ನಾನು ವಂದಿಸುತ್ತೇನೆ ಎಂದು ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಭಾವುಕರಾದರು.

ಮಹಿಳಾ ವಿಜ್ಞಾನಿಗಳು ಚಂದ್ರಯಾನ 3ರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ 'ಶಿವಶಕ್ತಿ' ಪಾಯಿಂಟ್ ಮುಂಬರುವ ಪೀಳಿಗೆಗೆ ವಿಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಬಳಸಲು ಪ್ರೇರೇಪಿಸುತ್ತದೆ. ಜನರ ಕಲ್ಯಾಣವೇ ನಮ್ಮ ಪರಮೋಚ್ಚ ಬದ್ಧತೆ. ಕೆಲವೇ ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಉದ್ಯಮವು 8 ಬಿಲಿಯನ್ ಡಾಲರ್‌ಗಳಿಂದ 16 ಬಿಲಿಯನ್ ಡಾಲರ್ ಆಗಲಿದೆ ಎಂದು ತಜ್ಞರು ಹೇಳುತ್ತಾರೆ ಎಂದರು.

ಚಂದ್ರಯಾನದ ಹಾದಿ

* ಜುಲೈ 14 – ಉಡಾವಣೆ

* ಆಗಸ್ಟ್ 5 – ಚಂದ್ರನ ಕಕ್ಷೆಗೆ ಪ್ರವೇಶ

* ಆಗಸ್ಟ್ 17 – ಲ್ಯಾಂಡರ್ ಮಾಡ್ಯೂಲ್ ಬೇರ್ಪಡೆಯಾಗುವ ಪ್ರಕ್ರಿಯೆ ಯಶಸ್ವಿ

* ಆಗಸ್ಟ್ 6, 9, 14 ಮತ್ತು 16 – ಉಪಗ್ರಹದ ಕಕ್ಷೆ ಬದಲಾವಣೆ

* ಹಂತ-ಹಂತವಾಗಿ ಚಂದ್ರನ ಹತ್ತಿರಕ್ಕೆ ಬಂದ ನೌಕೆ

* ಆಗಸ್ಟ್ 23 – ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದ ಲ್ಯಾಂಡರ್

*1959ರಲ್ಲಿ ಜಾಗತಿಕವಾಗಿ ಮೊದಲ ಬಾರಿ ರಷ್ಯಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.

*1966ರಲ್ಲಿ ಅಮೆರಿಕ ಕೂಡ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿದೆ

*2013ರಲ್ಲಿ ಚೀನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.

*600 ಕೋಟಿ ರೂ.: ಚಂದ್ರಯಾನ-3 ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ

*40 ದಿನ: ಒಟ್ಟು ಅಂತರಿಕ್ಷದಲ್ಲಿ ಪ್ರಯಾಣಿಸಿದ ನೌಕೆ

*3.84 ಲಕ್ಷ: ಕಿ.ಮೀ ಕ್ರಮಿಸಿದ ದೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net