ಚಂದ್ರಯಾನ 3 ಯಶಸ್ವಿ; ಚಂದ್ರಲೋಕಕ್ಕೂ ಹಬ್ಬಿದ ಬೆಳಗಾವಿ ಕೀರ್ತಿ

Chandrayaan3 message
Published on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದೆ. ಚಂದ್ರನ ಮೇಲ್ಮೈ ನಲ್ಲಿ ಇಳಿದಿರುವ ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಹೊರಬಂದಿದ್ದು ತನ್ನ ಅನ್ವೇಷಣೆಯನ್ನು ಪ್ರಾರಂಭಿಸಿದೆ. ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗಿರುವ ರಾಕೆಟ್​ನ ಕೆಲವು ಬಿಡಿ ಭಾಗಗಳ ತಯಾರಿಕೆಯಲ್ಲಿ ಕುಂದಾನಗರಿ ಬೆಳಗಾವಿಯ ನಂಟಿದೆ.

ಚಂದ್ರಯಾನ–3ರ ಬಾಹ್ಯಾಕಾಶ ನೌಕೆಯ ಪ್ರಮುಖ ಬಿಡಿಭಾಗಗಳನ್ನ ಬೆಳಗಾವಿಯಲ್ಲಿ ತಯಾರಿ ಮಾಡಲಾಗಿದೆ. ಬೆಳಗಾವಿ ‌ನಗರದ 'ಸರ್ವೊ ಕಂಟ್ರೋಲ್ಸ್‌ ಏರೋಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಕಂಪನಿ' ಸಿದ್ಧಪಡಿಸಿದ ಬಿಡಿ ಭಾಗಗಳು ಚಂದ್ರಯಾನ-3ರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚಂದ್ರಯಾನ-3ರಲ್ಲಿ ಸರ್ವೋ ಕಂಪನಯಿಂದ ಹೈಡ್ರಾಲಿಕ್‌ ಉಪಕರಣ, ವಾಲ್ವ್‌ಗಳು, ಸ್ಪೂಲ್ಸ್‌, ಸ್ಲೀವ್ಸ್‌, ಮ್ಯಾನಿಫೋಲ್ಡ್‌ ಬ್ಲಾಕ್ಸ್, ಎಲೆಕ್ಟ್ರಾನಿಕ್‌ ಸೆನ್ಸರ್‌ಗಳನ್ನು ಇದೇ ಕಂಪನಿಯಿಂದ ಕಳುಹಿಸಲಾಗಿದೆ.

ಈ ಹೈಡ್ರಾಲಿಕ್‌ ಉಪಕರಣಗಳು ಗಗನನೌಕೆಯ ಪಥ ನಿರ್ವಹಣೆ (ನಾಜಲ್‌ ಕಂಟ್ರೋಲ್‌) ಮಾಡಲು ಸಹಕರಿಸುತ್ತವೆ. ನೌಕೆಯು ಚಂದ್ರನ ಕಕ್ಷೆಯಲ್ಲಿ ಸುತ್ತವಾಗ ಸೆನ್ಸರ್‌ ಕೆಲಸ ಮಾಡಲಿವೆ.ನೌಕೆಯಿಂದ ಚಂದ್ರನ ಮೇಲಿಳಿಯುವ ರೋವರ್‌ನಲ್ಲೂ ಈ ಸೆನ್ಸರ್‌ ಗಳು ಕೆಲಸ ಮಾಡಲಿವೆ ಎಂದು ದೀಪಕ್ ಧಡೋತಿ ಮಾಹಿತಿ ನೀಡಿದ್ದಾರೆ.

ಸರ್ವೋ ಕಂಪನಿಯು ಚಂದ್ರಯಾನ–2 ಹಾಗೂ ಮಂಗಳಯಾನಕ್ಕೂ ಬಿಡಿಭಾಗಗಳನ್ನು ಪೂರೈಸಿತ್ತು. ಕಳೆದ 15 ವರ್ಷಗಳಿಂದ ಸತತವಾಗಿ ಇಸ್ರೋ ಸಂಸ್ಥೆಯೊಂದಿಗೆ ನಂಟು ಇಟ್ಟುಕೊಂಡಿರುವ ಸರ್ವೋ ಕಂಪನಿ ಇದೀಗ ಗಗನ್ ಯಾನಕ್ಕೂ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಇದರಡಿ 40ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net