

ಚಂದ್ರಗುತ್ತಿ (ಸೊರಬ): ಕಳೆದ 9 ವರ್ಷಗಳಿಂದ ಕಮರೂರು ಪ್ರೌಢಶಾಲೆಯಲ್ಲಿ ಸಮಾಜ ಮತ್ತು ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಿಠ್ಠಲ್ ಹಡಪದ ವರ್ಗಾವಣೆಗೊಂಡಿರುವುದು ಬೇಸರ ತಂದಿದೆ ಎಂದು ಗ್ರಾಮ ಸಮಿತಿ ಅಧ್ಯಕ್ಷ ಕೆ.ಟಿ.ಚೌಡಪ್ಪ ಹೇಳಿದರು.
ಕಮರೂರು ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಮಾತನಾಡಿ, ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದ ಇವರು ಪ್ರತಿದಿನವೂ ರಾತ್ರಿತಮ್ಮ ಶಾಲೆಯಲ್ಲಿ ಓದುವ 10 ನೇ ತರಗತಿಯ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಮಾರ್ಗದರ್ಶನ ನೀಡಿದ್ದಾರೆ. ಇವರ ಮಾರ್ಗದರ್ಶನದಿಂದಾಗಿ ಹಲವಾರು ವಿದ್ಯಾರ್ಥಿಗಳು ಉತ್ತಮ ಹುದ್ದೆಯಲ್ಲಿದ್ದಾರೆ. ಶಾಲೆಯನ್ನು ತೊರೆದ ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ಕರೆತಂದು ಶಿಕ್ಷಣ ಕೊಡಿಸಿದ್ದಾರೆ ಎಂದರು.
ಬೆನ್ನೂರು ಗ್ರಾಪಂ ಅಧ್ಯಕ್ಷ ದೇವರಾಜ್ ಮಾತನಾಡಿ, ಗ್ರಾಮಸ್ಥರಿಗೆ ಸಹಾಯ ಮತ್ತು ವೈಯಕ್ತಿಕವಾಗಿ ಪ್ರತಿ ವರ್ಷ ಹತ್ತಾರು ಮಕ್ಕಳಿಗೆ ಬಟ್ಟೆ, ಪುಸ್ತಕ ವ್ಯವಸ್ಥೆ ಮಾಡಿ ಕಾಲೇಜು ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದರು ಎಂದರು. ಹಡಪದ ಅವರ ಕೆಲಸವನ್ನು ಸ್ಮರಿಸಿ ಕಮರೂರು ಗ್ರಾಮದ ಹಿರಿಯರು, ಹಳೆಯ ವಿದ್ಯಾರ್ಥಿಗಳು ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಪ್ರಮುಖರಾದ ನಾಗೇಶ, ವಸಂತ್, ಎಂ.ಕೆ.ಅಣ್ಣಪ್ಪ, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು. ವಿಠ್ಠಲ ಹಡಪದ ಅವರು ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಕೆಸರಗೊಪ್ಪ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ.