ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಿದ ಚಂದ್ರಬಾಬು ನಾಯ್ಡು

cbn
Published on

ವಿಜಯವಾಡ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ನಿಯೋಜಿತ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಮಂಗಳವಾರ ವಿಜಯವಾಡದಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಅಮರಾವತಿ ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ನಾಳೆ (ಜೂನ್‌ 12) ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಈ ಮಧ್ಯೆ ಮಂಗಳವಾರ ವಿಜಯವಾಡದಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು, ಅಮರಾವತಿಯನ್ನು ಆಂಧ್ರ ಪ್ರದೇಶದ ರಾಜಧಾನಿಯನ್ನಾಗಿ ಘೋಷಿಸಿದರು. ಈ ಬಾರಿ ಆಂಧ್ರ ಪ್ರದೇಶದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜೆಎಸ್‌ಪಿ ಒಟ್ಟಾಗಿ ಚುನಾವಣೆ ಎದುರಿಸಿದ್ದವು.

ಟಿಡಿಪಿ-ಜೆಎಸ್‌ಪಿ-ಬಿಜೆಪಿ ಶಾಸಕರು ಎ-ಕನ್ವೆನ್ಷನ್ ಸೆಂಟರ್‌ನಲ್ಲಿ ಸಭೆ ನಡೆಸಿ ಚಂದ್ರಬಾಬು ನಾಯ್ಡು ಅವರನ್ನು ಸಿಎಂ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅಟ್ಚನ್ ನಾಯ್ಡು ಅವರು ಚಂದ್ರಬಾಬು ನಾಯ್ಡು ಅವರನ್ನು ಟಿಡಿಎಲ್‌ಪಿ ನಾಯಕರಾಗಿ ಆಯ್ಕೆ ಮಾಡಿದ್ದಾರೆ ಎಂದು ಘೋಷಿಸಿದರು.

ಎನ್‌ಡಿಎ ಸಭೆಯಲ್ಲಿ ಟಿಡಿಪಿ, ಬಿಜೆಪಿ ಮತ್ತು ಪವನ್‌ ಕಲ್ಯಾಣ ನೇತೃತ್ವದ ಜನಸೇನಾ ಪಾರ್ಟಿ ಶಾಸಕರು ಪಾಲ್ಗೊಂಡಿದ್ದರು. ಈ ವೇಳೆ ಮುಖ್ಯಮಂತ್ರಿ ಹುದ್ದೆಗೆ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪವನ್‌ ಕಲ್ಯಾಣ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿಯ ಡಿ.ಪುರಂದರೇಶ್ವರಿ ಬೆಂಬಲ ಸೂಚಿಸಿದರು. ಬಳಿಕ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ ಚಂದ್ರಬಾಬು ನಾಯ್ಡು ಅವರು, ಪ್ರಧಾನಿ ಮೋದಿ ಮತ್ತು ಎನ್‌ಡಿಎ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ಕೆಲಸ ಮಾಡುವ ಸಮಯ ಬಂದಿದೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಸಹಕಾರ ಅತ್ಯಗತ್ಯ. ರಾಜ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಕೇಂದ್ರ ನಾಯಕರು ಹೇಳಿದ್ದಾರೆ. ಆಂಧ್ರಪ್ರದೇಶ ಪಾಳುಬಿದ್ದಿದ್ದು, ಅದನ್ನು ಪುನಶ್ಚೇತನಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.

ಮಾಜಿ ಸಿಎಂ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ಈ ಹಿಂದೆ ವಿಶಾಖಪಟ್ಟಣಂ ಅನ್ನು ಆಡಳಿತಾತ್ಮಕ ರಾಜಧಾನಿಯಾಗಿ ಅಭಿವೃದ್ಧಿಪಡಿಸುವುದಾಗಿ ಮತ್ತು ಅಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದ್ದರು. ಇದನ್ನು ಪ್ರಸ್ತಾವಿಸಿದ ಚಂದ್ರಬಾಬು ನಾಯ್ಡು, ವಿಶಾಖಪಟ್ಟಣಂನಲ್ಲಿ ವೈಎಸ್‌ಆರ್‌ಸಿಪಿಯನ್ನು ಸೋಲಿಸುವ ಮೂಲಕ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ತಿರುಗೇಟು ನೀಡಿದರು.

"ನಮ್ಮ ಸರ್ಕಾರದಲ್ಲಿ ಮೂರು ರಾಜಧಾನಿಗಳ ಆಟ ನಡೆಯುವುದಿಲ್ಲ. ನಮ್ಮ ರಾಜಧಾನಿ ಅಮರಾವತಿ. ಅಮರಾವತಿಯೇ ರಾಜಧಾನಿ" ಎಂದು ನಾಯ್ಡು ಪ್ರತಿಪಾದಿಸಿದರು. ಎನ್‌ಡಿಎ ಮೈತ್ರಿಕೂಟವು 165 ವಿಧಾನಸಭಾ ಸ್ಥಾನಗಳನ್ನು ಮತ್ತು 21 ಲೋಕಸಭಾ ಸ್ಥಾನಗಳನ್ನು ಒಟ್ಟಾರೆಯಾಗಿ ಗೆದ್ದಿದೆ. ಟಿಡಿಪಿ ಸ್ವತಃ 135 ಅಸೆಂಬ್ಲಿ ಮತ್ತು 16 ಲೋಕಸಭಾ ಸ್ಥಾನಗಳನ್ನು ಗೆದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net