'ಸೂಪರ್​ ಸಿಕ್ಸ್​ ಅಲ್ಲ ಸೂಪರ್​ ಚೀಟ್ಸ್'! ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ನಟಿ ರೋಜಾ ಗರಂ, ಪ್ರಶ್ನೆಗಳ ಸುರಿಮಳೆ​ | Roja

ವಿಜಯವಾಣಿ - 2024-11-11T200407.520
Published on

ಅಮರಾವತಿ: ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಮಂಡಿಸಿದ ಮೊದಲ ಬಜೆಟ್​ನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಂಚನೆ ಇದೀಗ ಬಟಾಬಯಲಾಗಿದೆ ಎಂದು ಚಿತ್ರನಟಿ, ಮಾಜಿ ಸಚಿವೆ ಆರ್.ಕೆ. ರೋಜಾ (Roja) ಟೀಕಿಸಿದ್ದಾರೆ. ಚುನಾವಣೆಯ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದ 'ಸೂಪರ್ ಸಿಕ್ಸ್' ಈಗ 'ಸೂಪರ್ ಚೀಟ್ಸ್' ಆಗಿ ಬದಲಾಗಿದೆ ಎಂದು ರೋಜಾ ವ್ಯಂಗ್ಯವಾಡಿದ್ದಾರೆ. ಇಂದು ನಡೆದ ಸಭೆಯ ಅಂಗವಾಗಿ ಆಂಧ್ರ ಸರ್ಕಾರ ಮಂಡಿಸಿದ ಬಜೆಟ್‌ ಬಗ್ಗೆ ನಟಿ ಒಂದಷ್ಟು ಪ್ರಶ್ನೆಗಳನ್ನು ತಮ್ಮ ಎಕ್ಸ್ (ಹಿಂದಿನ ಟ್ವಿಟರ್​)​ ಖಾತೆಯಲ್ಲಿ ಬರೆದು, ಸಿಎಂ ಮುಂದಿಟ್ಟಿದ್ದಾರೆ.

" ಚಂದ್ರಬಾಬು ಮತ್ತೊಮ್ಮೆ ಮಹಿಳೆಯರಿಗೆ ದ್ರೋಹ ಮಾಡಿದ್ದಾರೆ. ಮೊದಲ ಬಜೆಟ್​ನಲ್ಲಿಯೇ ಚಂದ್ರಬಾಬು ಅವರ ವಂಚನೆ ಬಯಲಾಗಿದೆ. 19ರಿಂದ 59 ವರ್ಷ ವಯಸ್ಸಿನ ಮಹಿಳೆಯರಿಗೆ 1,500 ರೂ. ದರದಲ್ಲಿ ವರ್ಷಕ್ಕೆ 18,000. ಬಜೆಟ್‌ನಲ್ಲಿ ಹಣ ನೀಡದಿರುವುದು ವಂಚನೆ ಅಲ್ಲವೇ?, ಚುನಾವಣೆಯಲ್ಲಿ ಗೆದ್ದ ನಂತರ ಪ್ರತಿಯೊಬ್ಬ ನಿರುದ್ಯೋಗಿ ಯುವತಿ ಮತ್ತು ಯುವಕರಿಗೆ ಒಂದು ರೂಪಾಯಿ ಮಂಜೂರು ಮಾಡದಿರುವುದು ಸರಿಯೇ? ತಿಂಗಳಿಗೆ 3 ಸಾವಿರ ನಿರುದ್ಯೋಗ ಭತ್ಯೆ ನೀಡುತ್ತಾರಾ?, ಚುನಾವಣೆಯಲ್ಲಿ ಗೆದ್ದು ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಮಾಡ್ತಾರೆ ಎಂದರು. ಈಗ ಆ ಯೋಜನೆಗೂ ಹಣ ಕೊಟ್ಟಿಲ್ಲ. ಇದು ಮೋಸವಲ್ಲವೇ? ಇದೆಲ್ಲವೂ ಸುಳ್ಳಲ್ಲವೇ" ಎಂದು ಚಂದ್ರಬಾಬು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

"ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದಿದ್ದರು. ಆದರೆ. ಈ ವರ್ಷ ಕೊಟ್ಟಿದ್ದು ಕೇವಲ ಎರಡು ಸಿಲಿಂಡರ್! ಇದು ವಂಚನೆ ಅಲ್ಲವೇ? 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪಿಂಚಣಿ ನೀಡಲಾಗುವುದು ಎಂದರು. ಈ ಬಜೆಟ್‌ನಲ್ಲಿ ಏನು ಪ್ರಸ್ತಾಪವಾಗಿದೆ? ವಾರ್ಷಿಕ 20,000 ರೂ. ಬಂಡವಾಳ ನೆರವು ನೀಡುವುದಾಗಿ ಹೇಳಿದ್ದರು. ರೈತರಿಗೆ 10,000 ಕೋಟಿ ರೂ. ನೀಡುವುದಾಗಿ ಮೋಸ ಮಾಡಿ, ಕೇವಲ 4,500 ಕೋಟಿ ರೂ. ನೀಡಿದ್ದಾರೆ. ಚುನಾವಣೆಯಲ್ಲಿ ನಿಮಗೆ ಮತ ಚಲಾಯಿಸಿದ ಜನರಿಗೆ ಏನು ಹೇಳ್ತೀರಿ? ಮನೆ ಮನೆಗೆ ಬಾಬು ಗ್ಯಾರಂಟಿ ನೀಡಿದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್​, ಭವಿಷ್ಯಕ್ಕೆ ಗ್ಯಾರಂಟಿ ಎಂದು ಹೇಳಿದ್ದರು. ಭರವಸೆಯ ಬಾಂಡ್‌ಗಳನ್ನು ಏನು ಮಾಡಬೇಕು? ಈಗ ಜನರು ಆ ಅಮಾನ್ಯ ಬಾಂಡ್‌ಗಳ ಮೇಲೆ ವಂಚನೆ ಕೇಸ್​ ದಾಖಲಿಸಬೇಕೇ? ಉತ್ತರಿಸಿ ಎಂದು ರೋಜಾ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net