ಭೋಗತನುವಿನಲ್ಲಿ ಆಗದ ಸಿದ್ಧಿ

ವಿಜಯವಾಣಿ
Published on

ಉಪಮಾರಹಿತವಾದ ನಿತ್ಯಸುಖದ ಪ್ರಾಪ್ತಿಯು, ಮರ್ತ್ಯೋಕದ ಮಾನವ ಶರೀರಧಾರಿಗಳಲ್ಲದೆ, ದೇವಲೋಕದ ಭೋಗವೈಭವಗಳಲ್ಲಿ ಮುಳುಗಿದ ಭೋಗತನುವಿನಲ್ಲಿ ಆಗದು. ದೇವಾನುದೇವತೆಗಳು ಭೋಗವಿಲಾಸದಲ್ಲಿ ಮುಳುಗಿದವರು. ಅವರಿಗೆ ಸ್ವರ್ಗಸುಖಗಳಷ್ಟೇ ನಿತ್ಯಸುಖದ ಪ್ರಾಪ್ತಿ ಇಲ್ಲ. ನಿತ್ಯಸುಖ ಪಡೆಯಬೇಕಾದಲ್ಲಿ ಮರ್ತ್ಯಲ್ಲಿ ಮಾನವ ಶರೀರಗಳಾಗಿ ಜನಿಸಿ ಯೋಗ್ಯ ಗುರುವಿನಿಂದ ಉಪದೇಶ ಪಡೆದು ನಿತ್ಯವನ್ನು ತಿಳಿದು ಮುಕ್ತನಾಗಬೇಕು ಎಂಬುದನ್ನು ಪ್ರಭುಲಿಂಗಲೀಲೆ ಕಾವ್ಯದಲ್ಲಿ ಚಾಮರಸ ಕವಿ ಪ್ರತಿಪಾದಿಸಿದ್ದಾರೆ. ವಿಶ್ವದಲ್ಲಿ ಮಾನವ ದೇಹವೇ ಶ್ರೇಷ್ಠ ಎಂಬುದಾಗಿ ಆದಿಶಂಕರಾಚಾರ್ಯರು ಹೇಳಿದ್ದಾರೆ. ಅದೇ ರೀತಿ ನಿಜಗುಣರು -ಸ್ಥಾವರಕೆ ಸುಪ್ತಿ ಪಶುಜೀವರ್ಗೆ ಸ್ವಪ್ನವದು | ದೇವಜಾಲಕ್ಕೆ ಜಾಗ್ರವೀ ಮನುಜರ್ಗೆ| ಭಾವಿಸಲವಸ್ಥೆಗಳು ಮೂರು||

ಅಂದರೆ ತಮೋಗುಣದ ಅಧಿಕತೆಯಿಂದ ಸ್ಥಾವರಗಳು ಸುಪ್ತಿ ಅವಸ್ಥೆಯರುತ್ತವೆ. ಪಶು-ಪಕ್ಷಿ ಪ್ರಾಣಿಗಳುರಜೋಗುಣಾತ್ಮಕ ಸ್ವಪ್ನಾ ವಸ್ಥೆ ಯಲ್ಲಿರುತ್ತವೆ. ದೇವತೆಗಳು ಸದಾ ಜಾಗ್ರದಾವಸ್ಥೆಯಲ್ಲಿ ರುತ್ತಾರೆ. ಮನುಷ್ಯರಿಗೆ ಮಾತ್ರ ತ್ರಿಗುಣಾತ್ಮಕ 3 ಅವಸ್ಥೆಗಳುಂಟು. ಆ ಅನುಭವ ದಿಂದ ಸತ್ಯಾಸತ್ಯತೆ ಅರಿಯಲು ವಿಶೇಷ ಅನುಕೂಲ ಇದೆ. ಎಲ್ಲ ಪ್ರಾಣಿಗಳಿಗಿಂತ, ದೇವಾನುದೇವತೆಗಳಿಗಿಂತ ಅಮೂಲ್ಯವಾದ ಮಾನವ ಜನ್ಮದ ಸಾರ್ಥಕತೆ ಅವಸ್ಥೆಗಳ ವಿಂಗಡಣೆಯ ಮೂಲಕ ಆತ್ಮಸ್ವರೂಪ ವನ್ನು ಯಥಾರ್ಥ ನಿಶ್ಚಯ ಮಾಡುವದರಲ್ಲಿದೆ.

ಈ ಅವಸ್ಥಾತ್ರಯ ವಿಚಾರ, ಯಥಾರ್ಥ ನಿಶ್ಚಯಕ್ಕೆ ಸಹಾಯಕ. ಮೋಕ್ಷ ಪಡೆಯಲು ಮಾನವ ದೇಹವೇ ಮಾಧ್ಯಮ. ದುರ್ಗಂಧದ ಹುತ್ತ ಇದೆಂದು ಒಡಲನ್ನು ತಿರಸ್ಕರಿಸಿದರೆ ಸಾಧನೆಗೆ ಸಾಧನವೇ ಇಲ್ಲವಾಗುವುದು. ಆಗ ಸಾಧಿಸುವದಾದರೂ ಏನನ್ನು? ಆದ್ದರಿಂದ ಋಷಿಗಳು ಈ ಒಡಲನ್ನು ಬ್ರಹ್ಮಪುರಿ ಎಂದು ಕರೆದಿದ್ದಾರೆ. ಈ ದೇಹವನ್ನು ಸಾಧನೆ- ಸಂಸ್ಕಾರಗಳ ಮೂಲಕ ಪಳಗಿಸಿ ಗುರಿ ಮುಟ್ಟ ಬೇಕು. ಮರ್ತ್ಯ ಲೋಕವೆಂಬ ಈ ಕರ್ಮಭೂಮಿಯಲ್ಲಿ ಸಾಧನೆಗೈದು ನಿಜವನರಿದು ಮುಕ್ತರಾಗಬೇಕಾಗಿದೆ. ಭೋಗಭೂಮಿಯ ಭೋಗ ತನುವಿನಲ್ಲಿ ಆಗದು (ದೇವತೆಗಳಿಗೂ ಆಗದು) ಆದರೆ, ಮಾನವರಿಗೆ ಸಾಧ್ಯವಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net