

ಕೊಳ್ಳೇಗಾಲ : ರಾಜ್ಯಸರ್ಕಾರದ ಆಯವ್ಯಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಶಾಸಕರರಲ್ಲಿ ಒಬ್ಬರಾದ ಎ.ಆರ್.ಕೃಷ್ಣಮೂರ್ತಿ ಅವರು ಪ್ರತಿನಿಧಿಸುವ ಕೊಳ್ಳೇಗಾಲ ತಾಲೂಕನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಿರುವ ಯಳಂದೂರಿಗೆ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಿರುವುದನ್ನು ಹೊರತುಪಡಿಸಿ, ಕೊಳ್ಳೇಗಾಲವನ್ನು ಈ ಬಾರಿಯ ಆಯವ್ಯಯದಲ್ಲಿ ನಿರ್ಕ್ಷಿಸಲಾಗಿದೆ ಎಂದು ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ವಿಶೇಷ ಅನುದಾನನೀಡಿ ವ್ಯಾಪಾರೀಕರಣಕ್ಕೆ ಪ್ರೋತ್ಸಾಹ ನೀಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ ಅಗಲೀಕರಣ, ಟೈಕ್ಸ್‌ಟೈಲ್ ಇಂಡಸ್ಟ್ರಿ ಪ್ರಾರಂಭ, ಹಂಪಾಪುರ ಗ್ರಾಮದ ಬಳಿ ಇರುವ ರೇಷ್ಮೆ ಮಾರುಕಟ್ಟೆ ಪುನರ್ ಪ್ರಾರಂಭ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡಬೇಕಾಗಿತ್ತು.
ಉಪವಿಭಾಗ ಆಸ್ಪತ್ರೆ ಕಡೆಗಣನೆ:
ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯನ್ನು ಉನ್ನತೀಕರಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದ್ದು, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಮಲೆಮಹದೇಶ್ವರ ಬೆಟ್ಟ ಹಾಗೂ ಹನೂರು ತಾಲೂಕಿನ ಜನರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯವಾಗಿ ಬೇಕಾಗಿರುವ ರಕ್ತನಿಧಿ ಕೇಂದ್ರ ಸ್ಥಾಪನೆ, ಸ್ಕ್ಯಾನಿಂಗ್ ಸೌಲಭ್ಯ ಹಾಗೂ ಇನ್ನಿತರೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಗಮನಹರಿಸಬೇಕಿತ್ತು. ಈ ಕುರಿತು ಸಾರ್ವಜನಿಕರು ಇರಿಸಿದ್ದ ನಿರೀಕ್ಷೆ ಸುಳ್ಳಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ ನಿರೀಕ್ಷೆಯೂ ಹುಸಿ:
ಕೊಳ್ಳೇಗಾಲ ತಾಲೂಕಿನ ಶಿವನ ಸಮುದ್ರದ ಭರಚುಕ್ಕಿ ಜಲಪಾತ, ಶಿವನಸಮುದ್ರದ ಸಮೂಹ ದೇವಾಲಯಗಳು ಹಾಗೂ ಇತರೆ ಐತಿಹಾಸಿಕ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಒತ್ತುನೀಡಿಲ್ಲ. ಗುಂಡಾಲ್ ಜಲಾಶಯ ಹಾಗೂ ಇನ್ನಿತರೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪೂರಕವಾಗುವಂತೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಮೀಸಲು ಇಡಬೇಕಿತ್ತು ಎಂಬುದು ಸಾರ್ವಜನಿಕರ ಒತ್ತಾಯವಾಗಿತ್ತು. ಸರ್ಕಾರ ನಿರೀಕ್ಷೆಯನ್ನು ಹುಸಿಮಾಡಿದೆ.
ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ತೆರೆಯಲು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದ್ದೆ. ಆದರೆ ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈಗಾಗಲೇ ಮುಚ್ಚಿರುವ ರೇಷ್ಮೆ ಕಾರ್ಖಾನೆ ಪುನರ್ ಆರಂಭಕ್ಕೂ ಸಚಿವರೊಂದಿಗೆ ಚರ್ಚಿಸಿದ್ದೆ. ಆದರೆ ಸರ್ಕಾರ ಬಡವರು, ರೈತಾಪಿ ವರ್ಗದವರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಬಜೆಟ್‌ನಲ್ಲಿ ಒತ್ತು ನೀಡಿದೆ. ಮುಂದಿನ ದಿನಗಳಲ್ಲಿ ಕೊಳ್ಳೇಗಾಲ ಅಭಿವೃದ್ಧಿಗೆ ಶ್ರಮವಹಿಸಲಾಗುವುದು.ಎ.ಆರ್.ಕೃಷ್ಣಮೂರ್ತಿ, ಶಾಸಕರು, ಕೊಳ್ಳೇಗಾಲ ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಒಂದಿಷ್ಟು ಪ್ರಾಧ್ಯನ್ಯತೆ ನೀಡಲಾಗಿದೆ. ಆದರೆ, ಕೊಳ್ಳೇಗಾಲ ತಾಲೂಕನ್ನು ನಿರ್ಲಕ್ಷಿಸಲಾಗಿದೆ. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ, ಭರಚುಕ್ಕಿ, ಗುಂಡಾಲ್ ಜಲಾಶಯ ಅಭಿವೃದ್ಧಿಗೆ ಗಮನಹರಿಸಬೇಕಿತ್ತು. ವ್ಯಾಪಾರ, ರೇಷ್ಮೆ ಉತ್ಪಾದನೆ ಹಾಗೂ ರೇಷ್ಮೆ ಕಾರ್ಖಾನೆ ಪುನರ್ ಪ್ರಾರಂಭಕ್ಕೆ ಉತ್ತೇಜನ ನೀಡಬೇಕಿತ್ತು. ಮುಂದೆ ಈ ಬಗ್ಗೆ ಗಮನಹರಿಸಲಿ. ಸಿ.ಚೆನ್ನಮಾದೇಗೌಡ, ಮಾಜಿ ಅಧ್ಯಕ್ಷರು, ಲಯನ್ಸ್ ಕ್ಲಬ್, ಕೊಳ್ಳೇಗಾಲ.