

ಚಾಮರಾಜನಗರ:ಜಿಲ್ಲಾ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಡಾ.ಬಾಬುಜಗಜೀವನರಾಮ್ ಸಮುದಾಯ ಭವನವನ್ನು ವಿಶಾಲವಾಗಿ ನಿರ್ಮಿಸಿಕೊಡಬೇಕು ಎಂದು ಡಾ.ಬಾಬುಜಗಜೀವನರಾಮ್ ಕ್ಷೇಮಾಭಿವೃದ್ದಿ ಟ್ರಸ್ಟ್ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಾಬುಜಗಜೀವನರಾಮ್ ಸಮುದಾಯ ಭವನವು ವಿಶಾಲವಾಗಿ ನಿರ್ಮಾಣವಾಗುತ್ತಿಲ್ಲ. ಸರ್ಕಾರ ಭವನ ನಿರ್ಮಾಣಕ್ಕೆ ಸುಮಾರು ೩.೫೦ ಲಕ್ಷ ಕೋಟಿ ರೂ. ಮಂಜೂರು ಮಾಡಿದೆ. ನಿರ್ಮಾಣವಾಗುತ್ತಿರುವ ಸಮುದಾಯ ಭವನದ ಕಟ್ಟಡದಿಂದ ಜಿಲ್ಲೆಯಲ್ಲಿರುವ ಸಮುದಾಯದ ಜನತೆಯ ಅನಾನುಕೂಲವಾಗಿದೆ. ಆದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ೧ ಎಕರೆ ಜಾಗಕ್ಕೆ ತಕ್ಕಂತೆ ವ್ಯವಸ್ಥಿತವಾಗಿ ವಿಶಾಲವಾದ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕು ಎಂದು ಮನವಿಯಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು,ಆರ್.ಎಚ್.ಲಿಂಗರಾಜು ಟ್ರಸ್ಟ್ ಅಧ್ಯಕ್ಷ ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಎನ್.ಶಿವಕುಮಾರ್ ಒತ್ತಾಯಿಸಿದ್ದಾರೆ.
ಡಾ.ಬಾಬುಜಗಜೀವನರಾಮ್ ಕ್ಷೇಮಾಭಿವೃದ್ದಿ ಟ್ರಸ್ಟ್ ನ ವೆಂಕಟೇಶ್, ಲಿಂಗರಾಜು, ಶಿವಕುಮಾರ್, ಮಹೇಶ್, ಮಹದೇವಸ್ವಾಮಿ ಹಾಜರಿದ್ದರು.