

ಚಾಮರಾಜನಗರ/ಕೊಳ್ಳೇಗಾಲ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮತ್ತು ಕೊಳ್ಳೇಗಾಲ ಮಾಜಿ ಶಾಸಕ ಜಯಣ್ಣಗೆ ನಿಗಮ, ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಸಿಕ್ಕಿದೆ.
ಪಿ.ಮರಿಸ್ವಾಮಿ ಅವರಿಗೆ ಕಾಡಾ ಅಧ್ಯಕ್ಷ ಗಿರಿ, ಮಾಜಿ ಶಾಸಕ ಜಯಣ್ಣಗೆ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಸ್ಥಾನ ಒಲಿದುಬಂದಿದೆ. ಇಬ್ಬರಿಗೂ ಅಧಿಕಾರ ಸಿಕ್ಕಿರುವುದಕ್ಕೆ ಮುಖಂಡರು ಮತ್ತು ಕಾರ್ಯಕರ್ತರ ವಲಯದಲ್ಲಿ ಸಂತಸ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮೂವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಂತಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಕೆಲವು ದಿನಗಳ ಹಿಂದೆ ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ಯಶಸ್ವಿ ಜಿಲ್ಲಾಧ್ಯಕ್ಷನ ಬಳಿಗೆ ಬಂದ ಅಧಿಕಾರ:
ಪಿ.ಮರಿಸ್ವಾಮಿ ಕಾಂಗ್ರೆಸ್‌ನ ಯಶಸ್ವಿ ಜಿಲ್ಲಾಧ್ಯಕ್ಷ ಎಂದೇ ಹೇಳಲಾಗುತ್ತದೆ. ಪಕ್ಷ ನೀಡಿದ ಎಲ್ಲ ಟಾಸ್ಕ್‌ಗಳನ್ನೂ ಉತ್ತಮವಾಗಿ ಮಾಡಿ ಮುಗಿಸಿ ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಮೆಚ್ಚುಗೆ ಪಡೆದಿದ್ದಾರೆ. ಇವರ ಸಕ್ರಿಯ ಕಾರ್ಯಕರ್ತನಾಗಿ ರಾಜಕೀಯ ಆರಂಭಿಸಿದರು. ತಾಲೂಕಿನ ನಂಜದೇವನಪುರ ಗ್ರಾಮದ ಪುಟ್ಟಮಾದಪ್ಪ ಇವರ ತಂದೆ. ಇವರು ಮಾಜಿ ಶಾಸಕ ದಿ.ಪುಟ್ಟಸ್ವಾಮಿ ಅವರ ಬೆಂಬಲಿಗರಾಗಿದ್ದರು. ತಂದೆಯ ಹಾದಿಯಲ್ಲೇ ರಾಜಕೀಯಕ್ಕೆ ಬಂದ ಮಗ ಪಿ.ಮರಿಸ್ವಾಮಿ 2005ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹರವೆ ಕ್ಷೇತ್ರದಿಂದ ಜಯಗಳಿಸಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿದ್ದರು. ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಮತ್ತು ಸದಾಶಿವಮೂರ್ತಿ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ ಖಜಾಂಚಿಯಾಗಿ ಕೆಲಸ ಮಾಡಿದರು. 2017ರಲ್ಲಿ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಮತ್ತು ಅಂದಿನ ಶಾಸಕರು ಇವರ ಕೆಲಸವನ್ನು ಗುರುತಿಸಿ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರು. ಅಂದಿನಿಂದ ಈವರೆಗೆ ಪಕ್ಷದ ಸೂಚನೆಯನ್ನು ಯಶಸ್ವಿಯಾಗಿ ಪಾಲನೆ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ಪಾದಯಾತ್ರೆ, ಭಾರತ್ ಜೋಡೋ ಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಘಟಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಲಿತಾಂಶ ಹೊರತರಲು ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷ ಇವರನ್ನು ಗುರುತಿಸಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದೆ.
ಜಯಣ್ಣಗೆ ಅಧ್ಯಕ್ಷಗಿರಿ: ಕೊಳ್ಳೇಗಾಲ ಮಾಜಿ ಶಾಸಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಎಸ್.ಜಯಣ್ಣಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಇವರು 1994(ಜೆಡಿಎಸ್), 2013ರ(ಕಾಂಗ್ರೆಸ್) ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದರು. ಚುನಾವಣೆಯಲ್ಲಿ ಎ.ಆರ್.ಕೃಷ್ಣಮೂರ್ತಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತ್ತು. ಇವರಿಗೆ ಬೆಂಬಲ ನೀಡಲು ಸಿದ್ದರಾಮಯ್ಯ ತಿಳಿಸಿದ್ದರು. ಪಕ್ಷ ಅಧಿಕಾರಕ್ಕೆ ಬಂದರೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಭರವಸೆಯೂ ಸಿಕ್ಕಿತ್ತು ಎನ್ನಲಾಗಿತ್ತು. ಅದರಂತೆಯೇ ಎಸ್.ಜಯಣ್ಣ ಅವರಿಗೆ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಸ್ಥಾನ ಸಿಕ್ಕಿದೆ.
ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪ್ರತಿಲ ಸಿಕ್ಕೇ ಸಿಗುತ್ತದೆ. ಪಕ್ಷದ ವರಿಷ್ಠರು ನನ್ನನ್ನು ಗುರುತಿಸಿ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರ ಸಹಕಾರ ನನಗೆ ಉತ್ತಮವಾಗಿ ಸಿಕ್ಕಿದೆ.ಪಿ.ಮರಿಸ್ವಾಮಿ, ಕಾಡಾ ಅಧ್ಯಕ್ಷ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಚಾಮರಾಜನಗರ