ಧೈರ್ಯವಾಗಿ ವೋಟು ಹಾಕಲು ಕೂಡಿಬಂತು ಕಾಲ

29rajesh1
Published on

ಚಾಮರಾಜನಗರ: ಇದುವರೆಗೆ ನಡೆದಿರುವ ಎಲ್ಲ ಚುನಾವಣೆಗಳಲ್ಲೂ ಈ ಗ್ರಾಮದ ಮತದಾರರು ಮತ ಚಲಾಯಿಸೋಕೆ ಹೋಗಲು ಹೆದರುತ್ತಿದ್ದರು. ಆದರೀಗ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಧೈರ್ಯವಾಗಿ ಮತದಾನ ಮಾಡಲು ಕಾಲ ಕೂಡಿಬಂದಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದಟ್ಟ ಕಾಡಿನ ಮಧ್ಯೆ ಇರುವ ಕುಗ್ರಾಮ ಕೊಕ್ಕಬರೆ. ಇಲ್ಲಿ ಪ್ರಸ್ತುತ 200ಕ್ಕೂ ಹೆಚ್ಚು ಮತದಾರರು ಇದ್ದಾರೆ. ಈ ಪ್ರದೇಶ ಒಂದು ಕಾಲದಲ್ಲಿ ನರಹಂತಕ ವೀರಪ್ಪನ್ ಕಾರ್ಯಕ್ಷೇತ್ರವಾಗಿತ್ತು. ಹೀಗಾಗಿ, ಅಂದು ರಾಜಕಾರಣಿಗಳು ಚುನಾವಣಾ ಪ್ರಚಾರಕ್ಕೆ ಬರಲು ಭಯಪಡುತ್ತಿದ್ದರು. ಅಧಿಕಾರಿಗಳು ಮತಗಟ್ಟೆ ಸ್ಥಾಪನೆ ಮಾಡಲು ಹಿಂಜರಿಯುತ್ತಿದ್ದರು. ಮತದಾರರು ಮತ ಹಾಕೋಕೆ ಹೋಗಲು ಹೆದರುತ್ತಿದ್ದರು. ಭದ್ರತೆ ಒದಗಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಕೊನೆಗೆ ವೀರಪ್ಪನ್ ಅಂತ್ಯಗೊಂಡ. ಆದರೂ ಮತದಾನ ಮಾಡಲು ಇದ್ದ ಅಡೆತಡೆಗಳು ತಪ್ಪಲಿಲ್ಲ..!

ಕೊಕ್ಕಬರೆ ಗ್ರಾಮದಲ್ಲಿ ಮತಗಟ್ಟೆ ಇರಲಿಲ್ಲ. 2 ಕಿಮೀ ದೂರದಲ್ಲಿರುವ ಕೊಂಬುಡಿಕ್ಕಿ ಗ್ರಾಮದ ಮತಗಟ್ಟೆಗೆ ಹೋಗಿ ಜನರು ಮತ ಹಾಕಬೇಕಿತ್ತು. ದುರ್ಗಮ ಹಾದಿ, ಕಾಡುಪ್ರಾಣಿಗಳ ಹಾವಳಿಗೆ ಮಧ್ಯೆ ಜೀವವನ್ನು ಕೈಯಲ್ಲಿ ಹಿಡಿದು ಮತಗಟ್ಟೆಗೆ ಹೋಗುತ್ತಿದ್ದರು. ಒಬ್ಬರು, ಇಬ್ಬರು ಹೋಗುವಾಗ ಕಾಡು ಪ್ರಾಣಿ ದಾಳಿ ಮಾಡಬಹುದೆಂಬ ಭಯಕ್ಕೆ ಎಲ್ಲರೂ ಒಂದು ಕಡೆ ಗುಂಪುಗೂಡಿ ಮತಗಟ್ಟೆಗೆ ಹೋಗುತ್ತಿದ್ದರು. ವಾಹನಗಳು ಸಂಚರಿಸಲಾಗದ ದುರ್ಗಮ ರಸ್ತೆಯಲ್ಲಿ ನಡೆದುಕೊಂಡೇ ಹೋಗಬೇಕು. ವಯಸ್ಸಾದರಿಂದ ಮತದಾನ ಮಾಡಿಸಲು ಜೋಲಿ ಕಟ್ಟಿಕೊಂಡು ಇಬ್ಬರು ಹೆಗಲ ಮೇಲೆ ಹೊತ್ತುಕೊಂಡು ಬರಬೇಕಿತ್ತು. ಸ್ವಾತಂತ್ರ್ಯ ಬಂದ ಬಳಿಕ ನಡೆದ ಮೊದಲ ಚುನಾವಣೆಯಿಂದ ಕಳೆದ ವಿಧಾನಸಭೆ ಚುನಾವಣೆವರೆಗೂ ಇಲ್ಲಿನ ಮತದಾರರು ಇದೇ ಪರಿಸ್ಥಿತಿ ಅನುಭವಿಸುತ್ತಿದ್ದರು. ಆದರೆ ಪ್ರಸಕ್ತ ಸಾಲಿನ ಲೋಕಸಭೆ ಚುನಾವಣೆಗಾಗಿ ಇದೇ ಮೊದಲ ಬಾರಿಗೆ ಕೊಕ್ಕಬರೆ ಗ್ರಾಮದಲ್ಲಿ ಮತಗಟ್ಟೆಯನ್ನು ಸ್ಥಾಪನೆ ಮಾಡಲಾಗಿದೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತಗಟ್ಟೆ ಸಜ್ಜುಗೊಳ್ಳುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಯಾವುದೇ ಭಯವಿಲ್ಲದೆ ಧೈರ್ಯವಾಗಿ ಮತದಾನ ಮಾಡಲು ಕೊಕ್ಕಬರೆ ಗ್ರಾಮಸ್ಥರಿಗೆ ಅವಕಾಶ ಸಿಕ್ಕಿದೆ.

ಶಾಲೆಗೆ ಅಭಿವೃದ್ಧಿ ಭಾಗ್ಯ:
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹನೂರು ತಾಲೂಕಿನಲ್ಲಿ 253 ಮತಗಟ್ಟೆಗಳನ್ನು ತೆರೆಯಲಾಗಿದೆ. ಇದರಲ್ಲಿ ಕೊಕ್ಕಬರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೊಸದಾಗಿ ಮತಗಟ್ಟೆ ತೆರೆಯಲಾಗುತ್ತಿದೆ. ಶಾಲೆ ನಿರ್ಮಾಣವಾಗಿ ಸುಮಾರು ವರ್ಷಗಳೇ ಕಳೆದಿವೆ. 1ರಿಂದ 5ನೇ ತರಗತಿವರೆಗೆ ಸುಮಾರು 19 ಮಕ್ಕಳು ಓದುತ್ತಿದ್ದಾರೆ. ಮತಗಟ್ಟೆ ಸ್ಥಾಪನೆ ಹಿನ್ನೆಲೆಯಲ್ಲಿ ಈ ಶಾಲೆಯ ರಿಪೇರಿ ಕೆಲಸ ನಡೆಯುತ್ತಿದೆ. ರ‌್ಯಾಂಪ್ ವ್ಯವಸ್ಥೆ, ಕುಡಿಯುವ ನೀರು, ಸುಣ್ಣಬಣ್ಣ, ನೆಲಹಾಸು, ಛಾವಣಿ, ಶೌಚಗೃಹ ರಿಪೇರಿ ಕೆಲಸ ನಡೆಯುತ್ತಿದೆ. ಈ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಈ ಹಿಂದಿನಿಂದಲೂ ಗ್ರಾಮಸ್ಥರು ಒತ್ತಾಯ ಮಾಡುತ್ತಲೇ ಬಂದಿದ್ದರು. ಆದರೆ ಈಗ ಮತಗಟ್ಟೆ ಸ್ಥಾಪನೆ ಕಾರಣಕ್ಕೆ ಅಭಿವೃದ್ಧಿ ಹೊಂದುತ್ತಿದೆ.

ಮತ ಚಲಾಯಿಸುವುದನ್ನು ತಪ್ಪಿಸಿಲ್ಲ
ಮತದಾನ ಮಾಡಲು ನಿರಾಸಕ್ತಿ ತೋರುವವರಿಗೆ ಕೊಕ್ಕಬರೆ ಗ್ರಾಮಸ್ಥರು ಮಾದರಿ. ವೀರಪ್ಪನ್ ಭಯ ಮತ್ತು ಕಾಡುಪ್ರಾಣಿಗಳ ಹಾವಳಿ ಇದ್ದರೂ ಈವರೆಗಿನ ಎಲ್ಲ ಚುನಾವಣೆಗಳಲ್ಲೂ ಮತದಾನ ಮಾಡಿದ್ದಾರೆ. ಪಕ್ಕದ ಊರಿನ ಮತಗಟ್ಟೆಗೆ ಹೋಗುವಾಗ ಇಲ್ಲಿನ ಜನರನ್ನು ಆನೆ ಅಟ್ಟಿಸಿಕೊಂಡು ಬಂದ ಉದಾಹರಣೆಗಳೂ ಇವೆ. ವಯಸ್ಸಾದವರನ್ನು ಜೋಲಿ ಕಟ್ಟಿಕೊಂಡು ಹೊತ್ತು ತಂದು ಮತದಾನ ಮಾಡಿದ್ದಾರೆ. ಈ ಕುಗ್ರಾಮದಲ್ಲಿ ರಸ್ತೆ, ಮೂಲಸೌಕರ್ಯಗಳಿಲ್ಲದೆ ಇಲ್ಲಿನ ಜನರು ಬದುಕುತ್ತಿದ್ದಾರೆ.

ನಮ್ಮ ಗ್ರಾಮದಲ್ಲಿ ಮತಗಟ್ಟೆ ಇರಲಿಲ್ಲ. ಪಕ್ಕದ ಊರಿಗೆ 2 ಕಿಮೀ ಕಾಲುದಾರಿಯಲ್ಲಿ ಹೋಗಿ ಮತದಾನ ಮಾಡಬೇಕಿತ್ತು. ಈ ಹಿಂದೆ ವೀರಪ್ಪನ್ ಭಯ, ಈಗ ಕಾಡುಪ್ರಾಣಿಗಳ ಭಯದಲ್ಲೇ ಮತದಾನ ಮಾಡಲು ಹೋಗುತ್ತಿದ್ದೆವು. ಇದನ್ನು ತಪ್ಪಿಸಲು ನಮ್ಮೂರಲ್ಲೇ ಮತಗಟ್ಟೆ ಸ್ಥಾಪನೆ ಮಾಡಿ ಎಂದು ಹಲವು ಬಾರಿ ಮನವಿ ಕೊಟ್ಟಿದ್ದೆ. ಈಗ ಮತಗಟ್ಟೆ ಸ್ಥಾಪನೆಯಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ನಮ್ಮೂರಿನ ಮತಗಟ್ಟೆಯಲ್ಲಿ ಮತ ಹಾಕುತ್ತೇವೆ.ಕೆ.ಎನ್.ಮಹದೇವಸ್ವಾಮಿ, ಕೊಕ್ಕಬರೆ ಗ್ರಾಮಸ್ಥ ಕೊಕ್ಕಬರೆ ಗ್ರಾಮಸ್ಥರು ಕಾಡಿನಲ್ಲಿ ನಡೆದುಕೊಂಡು ಹೋಗಿ ಮತದಾನ ಮಾಡಬೇಕಿತ್ತು. ಮತಗಟ್ಟೆ ಕೇಂದ್ರ ದೂರ ಎನ್ನುವುದಕ್ಕಿಂತಲೂ ಸಾಗುವ ದಾರಿ ದುರ್ಗಮವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಇರುವ ಕಡೆ ಜನಸಂಖ್ಯೆ ಕಡಿಮೆ ಇದ್ದರೂ ಮತದಾರರ ಸುರಕ್ಷತೆ ದೃಷ್ಟಿಯಿಂದ ಮೊದಲ ಬಾರಿಗೆ ಗ್ರಾಮದಲ್ಲಿ ಮತಗಟ್ಟೆ ಸ್ಥಾಪನೆ ಮಾಡಿದ್ದೇವೆ. ಮತದಾರರು ಯಾವುದೇ ಭಯವಿಲ್ಲದೆ ಮತದಾನ ಮಾಡಬಹುದು.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net