

ಚಾಮರಾಜನಗರ: ಆಪ್ತವಾದ ಮಾತುಗಾರಿಕೆ ಮತ್ತು ಅನುಭವಗಳನ್ನು ಒಳಗೊಂಡಿರುವ ಗುಲ್‌ಮೊಹರ್ ಕಥಾ ಸಂಕಲನ ಮನುಷ್ಯನ ಅಂತರಂಗದ ಆರ್ದ್ರತೆಗಳನ್ನು ಬಿಚ್ಚಿಡುತ್ತದೆ ಎಂದು ಹರವೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಎಂ.ಆರ್.ಸವಿತಾ ಬಣ್ಣಿಸಿದರು.
ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕಿ ಶೀಲಾ ಸತ್ಯೇಂದ್ರಸ್ವಾಮಿ ಅವರ ಗುಲ್ಮೊಹರ್ ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದರು. ಒಂದು ಆಪ್ತವಾದ ಮಾತುಗಾರಿಕೆ, ಅನುಭವಗಳನ್ನು ಕಥೆಗಳಲ್ಲಿ ಕಟ್ಟಿಕೊಡಲಾಗಿದೆ. ದೇಶಿಯ ಸೊಗಡಿನಲ್ಲಿ ಕಥೆಗಳು ಹುಟ್ಟಿದೆ. ಗುಲ್‌ಮೊಹರ್‌ನ ಸಾಮಾನ್ಯ ಕಥೆ ಓದುಗರಿಗೆ ಹತ್ತಿರವಾಗಿವೆ. ಯಾವ ಹೆಸರು ಇಲ್ಲದೆಯೂ ಕಥೆ ಬರೆಯುವ ತಂತ್ರಗಾರಿಕೆ ಲೇಖಕರ ಕಥೆಗಳಲ್ಲಿ ಇದೆ. ಹಲವು ವೈರುಧ್ಯಗಳನ್ನು ನಾವು ಬದುಕಿನಲ್ಲಿ ಕಾಣುತ್ತೇವೆ, ಆ ವೈರುಧ್ಯಗಳು ಕಥೆಗಳಲ್ಲಿ ಹರಡಿಕೊಂಡು ಬದುಕಿನ ಸಂಕೀರ್ಣತೆಯನ್ನು ತೋರಿಸಲಾಗುತ್ತದೆ ಎಂದರು.
ಕೋವಿಡ್ ಸಂದರ್ಭ ಹಾಗೂ ಆ ನಂತರದಲ್ಲಿ ರಚನೆಯಾಗಿರುವ ಕಥೆಗಳು ಇದಾಗಿದೆ. ಒಂದೇ ವಿಷಯವನ್ನು ಇಟ್ಟುಕೊಂಡು ಅನೇಕ ಕಥೆಗಳನ್ನು ಕಟ್ಟುವ ಜಾಣ್ಮೆಯನ್ನು ಶೀಲಾ ಅವರು ಹೊಂದಿದ್ದಾರೆ. ಯಾವುದೇ ಆದರ್ಶಗಳನ್ನು ವಿನಾಕಾರಣ ತುರುಕುವ ಕೆಲಸ ಮಾಡದೆ, ಸಹಜವಾದ ಪ್ರೀತಿ- ಕಾಳಜಿಯನ್ನು ಕಟ್ಟಿಕೊಡುತ್ತಾರೆ. ಒತ್ತಾಯಕ್ಕೆ ಒಳಗಾಗದೇ ಕಥೆ ಏನನ್ನು ಬೇಡುತ್ತದೋ ಅದನ್ನು ರೂಪಿಸಿದ್ದಾರೆ. ಕಥೆಗಳು ಮುಗಿದ ನಂತರವೂ ನಮ್ಮೊಳಗೆ ಅದು ಬೆಳೆಯುತ್ತಾ ಹೋಗುತ್ತದೆ. ತಾಯ್ತನದ ವಿಸ್ತಾರವಾದ ರೂಪ, ಬಡತನದಲ್ಲಿ ತೆಗೆದುಕೊಳ್ಳುವ ಸವಾಲು, ಬಾಲ್ಯವಿವಾಹದ ಸಂಕಟಗಳು ಹಾಗೂ ಬಹುತೇಕ ಕಥೆಗಳು ಸ್ತ್ರೀ ಪ್ರಧಾನವಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸಾಕಷ್ಟು ಪ್ರಸಿದ್ಧ ಲೇಖಕರ ಸಾಲಿನಲ್ಲಿ ಶೀಲಾ ಸತ್ಯೇಂದ್ರಸ್ವಾಮಿ ಹೆಸರು ಕೇಳಿಬರುತ್ತದೆ. ಮಹಿಳೆಯರು ಸಾಹಿತ್ಯ ರಚನೆ ಮಾಡುತ್ತಿಲ್ಲ ಎನ್ನುವ ಕಾಲದಲ್ಲಿ ಶೀಲಾ ಸತ್ಯೇಂದ್ರಸ್ವಾಮಿ ಅವರು ಕೃತಿ ಹೊರ ತಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಓದುವ ಸಂಸ್ಕೃತಿ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಅದೆಲ್ಲವೂ ಸುಳ್ಳು ಇತ್ತೀಚೆಗೆ ಹೆಚ್ಚಿನ ಕನ್ನಡ ಪುಸ್ತಕಗಳು ಮಾರಾಟವಾಗುತ್ತಿವೆ ಎಂದರು.
ಅನೇಕ ಪತ್ರಕರ್ತರು ಮತ್ತು ಸಾಹಿತಿಗಳು ಪ್ರಖ್ಯಾತರಾಗಲು ಚಾಮರಾಜನಗರ ಜಿಲ್ಲೆ ಕಾರಣವಾಗಿದೆ. ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ಆದ ಪರಿಣಾಮ ಸಾಕಷ್ಟು ಜನರು ಸ್ನಾತಕೋತ್ತರ ಪದವಿ ಪಡೆಯಲು ಸಾಧ್ಯವಾಗಿದೆ. ಯಾವುದೇ ಕಾರಣಕ್ಕೂ ವಿಶ್ವವಿದ್ಯಾಲಯವನ್ನು ವಿಲೀನಗೊಳಿಸಬಾರದು. ಸರ್ಕಾರ ಪ್ರಶಸ್ತಿಗೆ ಜಿಲ್ಲೆಯ ಸ್ಥಳೀಯರನ್ನು ಪರಿಗಣಿಸಬೇಕು. ಎಲ್ಲೆಡೆ ಪುಸ್ತಕ ಸಂಸ್ಕೃತಿಯನ್ನು ಬೆಳೆಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಶೈಲಕುಮಾರ್, ಸಾಹಿತಿ ಬಿಸಲವಾಡಿ ಸೋಮಶೇಖರ್, ಕೆ.ಶ್ರೀಧರ್ ಸಿರಿ, ಪ್ರಕಾಶಕ ಅಣಕು ರಾಮನಾಥ್, ಲೇಖಕಿ ಶೀಲಾ ಸತ್ಯೇಂದ್ರಸ್ವಾಮಿ, ನಿವೃತ್ತ ಶಿಕ್ಷಕ ಶ್ರೀನಿವಾಸಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.