ಕೊಳ್ಳೇಗಾಲ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೆಹಲಿ ಚಲೋ ಹಮ್ಮಿಕೊಂಡಿದ್ದ ರೈತರ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ, ಕರ್ನಾಟಕ ರೈತರನ್ನು ಬಂಧಿಸಿರುವುದು ಖಂಡನೀಯ ಎಂದು ಆರೋಪಿಸಿ ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ರಸ್ತೆ ಸಂಚಾರ ತಡೆದು ತಾಲೂಕು ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲಿ ಕುಳಿತ ರೈತ ಕಾರ್ಯಕರ್ತರು ಕೇಂದ್ರ ಸರ್ಕಾರ ವಿರುದ್ಧ ದಿಕ್ಕಾರ ಕೂಗಿದರು. ಕೂಡಲೇ ರೈತರನ್ನು ಬಂಧನ ಮುಕ್ತಗೊಳಿಸಬೇಕು. ಇಲ್ಲವೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ತಾಲೂಕು ರೈತ ಸಂಘದ ತಾಲೂಕು ಅಧ್ಯಕ್ಷ ಶಿವಮಲ್ಲು ಉಗನೀಯ ಮಾತನಾಡಿ, ದೇಶದಲ್ಲಿ ಅನ್ನದಾತರಿಗೆ ಅನ್ಯಾಯವಾಗುತ್ತಿದೆ. ಸಂವಿಧಾನದಡಿ ಸೌಮ್ಯವಾಗಿ ನ್ಯಾಯಕೇಳಲು ಹಾಗೂ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ಕೈಗೊಂಡಿದ್ದ ರೈತ ಚಳವಳಿಯನ್ನು ಹತ್ತಿಕ್ಕಿದ್ದಲ್ಲದೆ, ರೈತರನ್ನು ಬಂಧಿಸಲಾಗಿದೆ. ಅದರಲ್ಲಿ ಕರ್ನಾಟಕದ ಹಲವು ರೈತರಿದ್ದಾರೆ. ಈ ಕೂಡಲೇ ರೈತರನ್ನು ಬಂಧನ ಮುಕ್ತಗೊಳಿಸದಿದ್ದರೆ ಉಗ್ರ ಹೋರಾಟ ರಾಜ್ಯಾದ್ಯಂತ ನಡೆಯುತ್ತದೆ ಎಂದು ಎಚ್ಚರಿಸಿ ಪ್ರತಿಭಟನೆ ಅಂತ್ಯ ಮಾಡಿದರು.
ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ತಡೆ ನಡೆದ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಏರ್ಪಟಿತ್ತು. ವಾಹನಗಳು ಸಾಲುಗಟ್ಟಿ ರಸ್ತೆಯಲ್ಲಿ ನಿಲ್ಲಬೇಕಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಕಾಯಂ ಸದಸ್ಯ ರವಿನಾಯ್ಡು, ತಾಲೂಕು ರೈತ ಸಂಘದ ಕಾರ್ಯದರ್ಶಿ ಪೆರೆಯಾ, ರೈತ ಮುಖಂಡರಾದ ಮೋಳೆ ಶಿವರಾಮ್, ಶಿವಕುಮಾರ್, ಜಯರಾಜ್, ಚಾರ್ಲಿ ಮತ್ತಿತರಿದ್ದರು.