

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆಯವ್ಯಯದಲ್ಲಿ ಆನೇಕಲ್, ನೆಲಮಂಗಲ, ಹೊಸಕೋಟೆ, ಶೃಂಗೇರಿ, ಖಾನಾಪುರ, ಶಿರಹಟ್ಟಿ ಸೇರಿದಂತೆ ಯಳಂದೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಗಳನ್ನು 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದಲ್ಲದೇ, 2025-26ನೇ ಸಾಲಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕ ಒಟ್ಟಾರೆಯಾಗಿ 11 ಕೋಟಿ ರೂ. ಅನುದಾನ ನೀಡಲಾಗುತ್ತಿದೆ.
ಜಿಲ್ಲಾಸ್ಪತ್ರೆಯಲ್ಲಿ ಅವಶ್ಯಕತೆ ಇರುವ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಗಾಗಿ(ಗದಗ, ಕೊಪ್ಪಳ ಸೇರಿ) 150 ಕೋಟಿ. ರೂ. ಒದಗಿಸಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆವಣಿಗೆಗಳನ್ನು ಉತ್ತೇಜಿಸಲು ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ ಮಾಡುವುದು, ವಿವಿಧ ಜಿಲ್ಲೆಗಳಲ್ಲಿ ಇದನ್ನು ಸ್ಥಾಪನೆ ಮಾಡಲು 170 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್‌ಗಳನ್ನು ಜೆ.ಎಲ್.ಆರ್. ಸಂಸ್ಥೆ ಮೂಲಕ ನಿರ್ಮಾಣ ಮಾಡಲಾಗುವುದು, ಬಂಡೀಪುರದಲ್ಲಿ ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಆನೆ ಕಾರ್ಯ ಪಡೆ ರಚನೆ ಮತ್ತು ಹೆಚ್ಚುವರಿ ಮಾನವ ಸಂಪನ್ಮೂಲ, ಆತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಲಪಡಿಸಲು 10 ಕೋಟಿ ರೂ. ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಇದನ್ನು ಹೊರತಾಗಿಯೂ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ, ನೀರಾವರಿ, ಕೈಗಾರಿಕೆ, ಉದ್ಯೋಗ, ಶಿಕ್ಷಣ ಇನ್ನಿತರಅಂಶಗಳ ಅಭಿವೃದ್ಧಿಗೆ ಯೋಜನೆ ೋಷಣೆ ಮಾಡಬಹುದೆಂದು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಕುರಿತು ಸಾರ್ವಜನಿಕರಿಂದ ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಹನೂರಿಗೆ ಕೊಡುಗೆ ಶೂನ್ಯ
ಹನೂರು ತಾಲೂಕು ರಚನೆಯಾಗಿ 6 ವರ್ಷ ಕಳೆದಿದೆ. ಆದರೆ ತಾಲೂಕು ಆಸ್ಪತ್ರೆಯಿಲ್ಲ. ಹಾಗಾಗಿ ಪಟ್ಟಣದಲ್ಲಿರುವ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಹಲವು ವರ್ಷಗಳಿಂದಲೂ ಕ್ಷೇತ್ರದ ಜನತೆ ಒತ್ತಾಯಿಸುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಜಿಲ್ಲೆಯ ಯಳಂದೂರು ಆಸ್ಪತ್ರೆಯನ್ನು ಮಾತ್ರ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯಾಗಿ ನಿರ್ಮಿಸಲು ಬಜೆಟ್‌ನಲ್ಲಿ ತಿಳಿಸಲಾಗಿದ್ದು, ಹನೂರನ್ನು ಕೈ ಬಿಟ್ಟಿರುವುದು ನಿಜಕ್ಕೂ ವಿಪರ್ಯಾಸ.
ರವಿಗೌಡ, ಬೀದಿ ಬದಿ ವ್ಯಾಪಾರಿ ಹನೂರು
ಹೊಗೇನಕಲ್ ಅಭಿವೃದ್ಧಿ ಇಲ್ಲ
ಹೊಗೇನಕಲ್ ಜಲಪಾತ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿಗೆ ಕರ್ನಾಟಕ ಹಾಗೂ ತಮಿಳುನಾಡಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಅಗತ್ಯ ಮೂಲಸೌಕರ್ಯಗಳಿಲ್ಲ. ಹಾಗಾಗಿ ಹೊಗೇನಕಲ್ ಫಾಲ್ಸ್ ಪ್ರದೇಶವನ್ನು ಅಭಿವೃದ್ಧಿಪಡಿಸುವಂತೆ ಜನರ ಬಹು ವರ್ಷಗಳ ಬೇಡಿಕೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ.
ಹರ್ಷಿತಾ
ಮಹದೇಶ್ವರ ಬೆಟ್ಟ ಹನೂರು
ಸ್ವಾಗತಾರ್ಹ ಆಯವ್ಯಯ
ರಾಜ್ಯ ಸರ್ಕಾರದ ಮಂಡಿಸಿರುವ ಬಜೆಟ್ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ತರುತ್ತದೆ. ಶಾಲಾ- ಕಾಲೇಜುಗಳ ಕೊಠಡಿ ನಿರ್ಮಾಣ, ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡುವುದು ಮತ್ತು ಗುಣಾತ್ಮಾಕ ಶಿಕ್ಷಣ ಆದ್ಯತೆ ನೀಡಿರುವುದು. ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲು ಸಹಕಾರಿ ಆಗುತ್ತದೆ. ಬಡವರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಕ್ಕಿದಂತಾಗುತ್ತದೆ. ಮಹಿಳಾ ಸಬಲೀಕರಣ ಹಾಗೂ ಸಂವಿಧಾನ ಜಾಗೃತಿಗಾಗಿ ಅಳವಡಿಸುವ ಕಾರ್ಯಕ್ರಮಗಳು ಸ್ವಾಗತರ್ಹವಾಗಿದೆ. ಬಜೆಟ್ ಆಶಯಗಳು ಅನುಷ್ಠಾನಗೊಳ್ಳಬೇಕು. ಕೊಳ್ಳೇಗಾಲದ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಹಾಗೂ ಎಂಜಿಎಸ್‌ವಿ ಜೂನಿಯರ್ ಕಾಲೇಜುಗಳಿಗೆ ಅನುದಾನ ಘೋಷಿಸಬೇಕಿತ್ತು.
ಕಾವ್ಯ
ಬಿಎಸ್ಸಿ ವಿದ್ಯಾರ್ಥಿನಿ, ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಕೊಳ್ಳೇಗಾಲ
ಜಿಲ್ಲೆಯ ಪಾಲಿಗೆ ನಿರಾಶಾದಾಯಕ
ರಾಜ್ಯ ಸರ್ಕಾರದ ಬಜೆಟ್ ಒತ್ತಡದಲ್ಲಿ ನಿರ್ಮಿಸಿರುವ ಬಜೆಟ್ ಅನಿಸುತ್ತದೆ. ಇದು ಕಾಂಗ್ರೆಸ್ ಗ್ಯಾರಂಟಿ ನಿಭಾಯಿಸಲು ಮಂಡಿಸಿರುವ ಬಜೆಟ್ ಆಗಿ ಕಾಣುತ್ತಿದೆ. ಎಲ್ಲ ಕ್ಷೇತ್ರದ ತೆರಿಗೆ ಹೆಚ್ಚಳವಾಗಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಬರೆ ಬಿದ್ದಂತೆ ಆಗಿದೆ. ಜಿಲ್ಲೆಗೆ ನಿರೀಕ್ಷೆಯಂತೆ ಅಭಿವೃದ್ಧಿ ಯೋಜನೆಗಳನ್ನು ಬಜೆಟ್‌ನಲ್ಲಿ ನೀಡಿಲ್ಲ. ವಿಶೇಷ ಅನುದಾನ ನೀಡಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಹೊಗಲಾಡಿಸಲು ಕ್ರಮವಹಿಸಿಲ್ಲ. ಈ ಬಜೆಟ್ ಚಾಮರಾನಗರ ಜಿಲ್ಲೆಗೆ ನಿರಾಶಾದಾಯಕ ಬಜೆಟ್ ಎನ್ನಬಹುದು. ಶಿವನ ಸಮುದ್ರದ ಸಮೂಹ ದೇವಾಲಯ, ಭರಚುಕ್ಕಿ ಫಾಲ್ಸ್ ಅಭಿವೃದ್ಧಿಗೆ ನಯಾಪೈಸೆ ಇಲ್ಲ.
ಮಹದೇವಸ್ವಾಮಿ, ಕೊಳ್ಳೇಗಾಲ
ಜಿಲ್ಲಾ ವ್ಯಾಪ್ತಿಗೆ ಸೀಮಿತ ಸರಿಯಲ್ಲ
ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಸೌಲಭ್ಯ ಒದಗಿಸಿರುವುದು ಸಂತೋಷದ ವಿಷಯ. ಆದರೆ ಗ್ರಾಮೀಣ ಪತ್ರಕರ್ತರನ್ನು ಕೇವಲ ಅವರ ಜಿಲ್ಲೆಯ ವ್ಯಾಪ್ತಿಗೆ ಸೀಮಿತಗೊಳಿಸಿ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡಲು ಮಾತ್ರ ಬಸ್‌ಪಾಸ್ ಸೌಲಭ್ಯ ನೀಡಿರುವುದು ದೌರ್ಭಾಗ್ಯದ ವಿಚಾರ. ಕೇವಲ ಒಂದು ಜಿಲ್ಲೆಗೆ ಸೀಮಿತಗೊಳಿಸದೆ ಅಕ್ಕಪಕ್ಕದ ಜಿಲ್ಲೆಗಳಿಗೆ ಓಡಾಡಲು ಬಸ್ ಪಾಸ್ ಸೌಲಭ್ಯವಿದ್ದರೆ ಅನುಕೂಲವಾಗುತ್ತದೆ .ಮುಂದಿನ ಬಜೆಟ್‌ನಲ್ಲಾದರೂ ಭಾಗ್ಯಗಳನ್ನು ನೀಡುವ ಸರ್ಕಾರ ಪತ್ರಕರ್ತರಿಗೂ ಜಿಲ್ಲಾ ವ್ಯಾಪ್ತಿಗೆ ಮಾತ್ರ ಒಳಪಡಿಸದೆ ಕನಿಷ್ಠ ಎರಡು ಮೂರು ಜಿಲ್ಲಾ ವ್ಯಾಪ್ತಿಗಾದರೂ ಬಸ್‌ಪಾಸ್ ಸೌಲಭ್ಯ ಒದಗಿಸಲಿ.
ಸೋಮಶೇಖರ್
ಹಿರಿಯ ಪತ್ರಕರ್ತ, ಗುಂಡ್ಲುಪೇಟೆ
ಸಂತಸ ತಂದಿದೆ
ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಳಂದೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯಾಗಿ ಘೋಷಣೆ ಮಾಡಿ ಅನುದಾನ ಮೀಸಲಿಟ್ಟಿರುವುದು ಸಂತಸ ತಂದಿದೆ. ಈ ಭಾಗದ ಗ್ರಾಮೀಣ ಜನರಿಗೆ ಇದರಿಂದ ಹೆಚ್ಚು ಉಪಯುಕ್ತವಾಗಲಿದೆ. ಕಾಂಗ್ರೆಸ್ ಸರ್ಕಾರವು ನೀಡಿರುವ ಐದು ಗ್ಯಾರಂಟಿಗಳಿಗೂ ಅನುದಾನ ಮೀಸಲಿಟ್ಟುರುವುದು ಬಡ ವರ್ಗದ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ.
ಜ್ಯೋತಿ
ಗಂಗವಾಡಿ, ಯಳಂದೂರು
ಸಂಘರ್ಷ ಸುಧಾರಣೆ
ಬಂಡಿಪುರಕ್ಕೆ ವಿಶೇಷ ಕಾರ್ಯಪಡೆ ರಚಿಸಲು 10 ಕೋಟಿ ರೂ. ಅನುದಾನ ನೀಡಿ ಮೀಸಲು ಇಟ್ಟಿರುವುದು ಸ್ವಾಗತ. ಪ್ರವಾಸೋದ್ಯಮ ವೃದ್ಧಿಸುವ ನಿಟ್ಟಿನಲ್ಲಿ ಮಾಹಿತಿ ಕೇಂದ್ರ ತೆರೆಯಲು ಉದ್ದೇಶಿಸಿರುವುದು ಉತ್ತಮ ಯೋಜನೆ. ಇದು ಕೇವಲ ಪುಸ್ತಕದಲ್ಲಿ ಉಳಿಯದೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕು. ಇದರಿಂದ ತಲೆದೋರಿರುವ ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ತಕ್ಕಮಟ್ಟಿಗೆ ಸುಧಾರಣೆಯಾಗಲಿದೆ. ಹವಾಮಾನ ವೈಪರೀತ್ಯದಿಂದಾಗಿ ಅರಣ್ಯ ಉಳಿಸುವ ನಿಟ್ಟಿನಲ್ಲಿ ಬಂಡಿಪುರಕ್ಕೆ ಅರಣ್ಯ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿದ್ದರೆ ಇನ್ನು ಹೆಚ್ಚಿನ ಅನುಕೂಲವಾಗುತ್ತಿತ್ತು.
ನಾಗಾರ್ಜುನ
ಪರಿಸರವಾದಿ, ಗುಂಡ್ಲುಪೇಟೆ
ಕಲೆ, ಸಾಹಿತ್ಯಕ್ಕೆ ಬೆಲೆ ಕೊಟ್ಟ ಬಜೆಟ್
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ವಿಶ್ವಗುರು ಬಸವಣ್ಣ ಅವರ ಹಾದಿಯ ಸಾಮಾಜಿಕ ನ್ಯಾಯ ಪರವಾದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ನಾಟಕ, ಜಾನಪದ, ಕಲೆ, ಸಾಹಿತ್ಯ ಸಂಸ್ಕೃತಿಗಳ ಪುನಶ್ಚೇತನಕ್ಕೆ ಅನುದಾನ ನೀಡಿರುವುದು ಸ್ವಾಗತಾರ್ಹ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದಲಿತ ಕವಿ ನಾಡೋಜ ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡುತ್ತಿರುವುದು ಸಂತೋಷ ತಂದಿದೆ.
ಸಿ.ಎಂ.ನರಸಿಂಹಮೂರ್ತಿ
ಜಾನಪದ ಗಾಯಕ , ಚಾಮರಾಜನಗರ
ಎಲ್ಲ ವಲಯಕ್ಕೂ ಆದ್ಯತೆ
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಎಲ್ಲ ವಲಯಕ್ಕೂ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಸಿಮ್ಸ್ ಆಸ್ಪತ್ರೆಯ ಅಭಿವೃದ್ಧಿಗೆ ಅನುದಾನ, ಪ್ರಯೋಗಾಲಯ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಬಂಡೀಪುರದ ಅಭಿವೃದ್ಧಿಗೂ ಆದ್ಯತೆ ನೀಡಿದ್ದಾರೆ. ಯಳಂದೂರಿನಲ್ಲಿ ತಾಲೂಕು ಮಟ್ಟದ ಆಸ್ಪತ್ರೆ ನಿರ್ಮಾಣ, ಬರಗಾಲದ ಈ ಸಂದರ್ಭದಲ್ಲಿ ಅನ್ನದಾತನ ರಕ್ಷಣೆಗೆ ಬಜೆಟ್ ಬೆಂಬಲ ನೀಡಿದೆ. ಇದೊಂದು ಜನಸಾಮಾನ್ಯರ ಬಜೆಟ್ ಎಂದು ಹೇಳಬಹುದು.
ಬಿ.ಕೆ.ರವಿಕುಮಾರ್
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಚಾಮರಾಜನಗರ
ರೈತ ವಿರೋಧಿ, ಜನ ವಿರೋಧಿ
ದೂರದೃಷ್ಟಿ ಇಲ್ಲದ, ಅಭಿವೃದ್ಧಿಗೆ ವೇಗ ನೀಡದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಚಾಮರಾಜನಗರದಿಂದ ಮೂವರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರೂ ಯಾವುದೇ ಹೊಸ ಯೋಜನೆಗಳನ್ನು ಜಿಲ್ಲೆಗೆ ನೀಡಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪವೇ ಇಲ್ಲ, ಬಜೆಟ್‌ನಲ್ಲಿ ಚಾಮರಾಜನಗರವನ್ನು ಮತ್ತೊಮ್ಮೆ ನಿರ್ಲಕ್ಷ್ಯ ಮಾಡಿದ್ದಾರೆ. ಇದೊಂದು ರೈತ ವಿರೋಧಿ ಹಾಗೂ ಜನ ವಿರೋಧಿ ಬಜೆಟ್ ಆಗಿದೆ.
ಸಿ.ಎಸ್.ನಿರಂಜನ್‌ಕುಮಾರ್
ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ, ಗುಂಡ್ಲುಪೇಟೆ
ಮಹಿಳಾ ಸಬಲೀಕರಣಕ್ಕೆ ಒತ್ತು
ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಲಾಗಿದೆ. ಹೊಸ ಪದವಿ ಕಾಲೇಜುಗಳ ಸ್ಥಾಪನೆ ಹಾಗೂ ರಾಜ್ಯ ಶಿಕ್ಷಣ ನೀತಿಯ ಅನುಷ್ಠಾನ ಸ್ವಾಗತಾರ್ಹ. ಯುವಕರ ಕೌಶಲಕ್ಕೆ ಹೆಚ್ಚಿನ ಮಹತ್ವ ನೀಡಿರುವುದು ಶ್ಲಾಘನೀಯ. ಇನ್ನೂ ಹೆಚ್ಚಿನ ಕೈಗಾರಿಕೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಬಹುದಿತ್ತು.
ಪ್ರೊ.ಕೆ.ಚಾಮರಾಜು
ಅರ್ಥಶಾಸ್ತ್ರ ಪ್ರಾಧ್ಯಾಪಕ, ಸ.ಪ್ರ.ದ.ಕಾಲೇಜು
ಗುಂಡ್ಲುಪೇಟೆ
ಸಾಲ ಮನ್ನಾ ಮಾಡಬೇಕಿತ್ತು
ತೀವ್ರ ಬರದಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದು, ರಾಜ್ಯ ಸರ್ಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬೆಳೆ ಸಾಲ ಮನ್ನಾ ಮಾಡಬೇಕಿತ್ತು. ಕಬ್ಬಿನ ಬಾಕಿ ಹಣವನ್ನು ರೈತರಿಗೆ ಕೊಡಲು ಕ್ರಮ ವಹಿಸಬೇಕಾಗಿತ್ತು. ಇದೊಂದು ಚುನಾವಣಾ ಪ್ರಚಾರದ ಮತ್ತು ರೈತರ ಮೂಗಿಗೆ ತುಪ್ಪ ಸವರಿರುವ ಬಜೆಟ್. ಇದು ರೈತರ ಅಭಿವೃದ್ಧಿಗೆ ಪೂರಕವಾಗಿಲ್ಲ
ಹಳ್ಳಿಕೆರೆಹುಂಡಿ ಭಾಗ್ಯರಾಜ್
ಅಧ್ಯಕ್ಷ, ರಾಜ್ಯ ರೈತ ಸಂಘಟನೆ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ಚಾಮರಾಜನಗರ