ಬಂಡೀಪುರಕ್ಕೆ ಆನೆ ಕಾರ್ಯಪಡೆ ಮಂಜೂರು

16-GPT-1
Published on

ಗುಂಡ್ಲುಪೇಟೆ: ಈ ಬಾರಿ ಬಜೆಟ್‌ನಲ್ಲಿ ಬಂಡೀಪುರಕ್ಕೆ ಆನೆ ಕಾರ್ಯಪಡೆ ಮಂಜೂರು ಮಾಡಿರುವುದು ಕಾಡಂಚಿನ ಗ್ರಾಮಗಳಲ್ಲಿ ಆನೆ ಮಾನವ ಸಂಘರ್ಷ ತಪ್ಪಿಸಲು ನೆರವಾಗಲಿದೆ.

ಕಳೆದ ತಿಂಗಳು ಬಂಡೀಪುರಕ್ಕೆ ಭೇಟಿ ನೀಡಿದ್ದ ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಮಾನವ ಆನೆ ಸಂಘರ್ಷ ತಪ್ಪಿಸಲು ಆನೆ ಕಾರ್ಯಪಡೆ ರಚಿಸುವ ಬಗ್ಗೆ ಭರವಸೆ ನೀಡಿದ್ದರು. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಬಂಡೀಪುರಕ್ಕೆ ಹೊಸದಾಗಿ ಆನೆ ಕಾರ್ಯಪಡೆ ಮಂಜೂರು ಮಾಡಿದ್ದಾರೆ. 10 ಕೋಟಿ ರೂ. ಅನುದಾನದಲ್ಲಿ ಮಾನವ ಹಾಗೂ ಅತ್ಯಾಧುನಿಕ ಸಂಪನ್ಮೂಲಗಳನ್ನು ಒದಗಿಸುವುದಾಗಿ ಪ್ರಕಟಿಸಿದ್ದಾರೆ.

ಈಗಾಗಲೇ ಬಂಡೀಪುರ ರಾಷ್ಟ್ರೀಯ ಉದ್ಯಾನ ಹುಲಿಗಳ ಸಂಖ್ಯೆಯಲ್ಲಿ ರಾಷ್ಟ್ರದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, 1116 ಸಂಖ್ಯೆಯ ಆನೆಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದೆ. 3 ಉಪ ವಿಭಾಗಗಳು ಹಾಗೂ 13 ವಲಯಗಳನ್ನು ಹೊಂದಿರುವ ಬಂಡೀಪುರದ ಕುಂದಕೆರೆ, ಗೋಪಾಲಸ್ವಾಮಿ ಬೆಟ್ಟ, ಮದ್ದೂರು, ಓಂಕಾರ್, ಹೆಡಿಯಾಲ, ನುಗು. ಮೊಳೆಯೂರು ಹಾಗೂ ಎನ್.ಬೇಗೂರು ವಲಯಗಳ ಕಾಡಂಚಿನ ಗ್ರಾಮಗಳಿಗೆ ಪ್ರತಿ ದಿನವೂ ಆನೆ ದಾಳಿ ಪ್ರಕರಣಗಳು ನಡೆಯುತ್ತಲೇ ಇವೆ. ಬೇಸಿಗೆ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಮೇವು ಹಾಗೂ ಕುಡಿಯುವ ನೀರಿನ ಕೊರತೆಯಾದಾಗ ಬಹುತೇಕ ಎಲ್ಲ ವಲಯಗಳಲ್ಲಿಯೂ ಆನೆಗಳ ದಾಳಿ ಪ್ರಕರಣಗಳು ನಿತ್ಯ ನಿರಂತರವಾಗಿವೆ.

ಹಿಂದೆ ನಿರ್ಮಿಸಿದ ಕಾಡಂಚಿನಲ್ಲಿ ನಿರ್ಮಿಸಿದ ಆನೆ ಕಂದಕ, ಸೋಲಾರ್ ಬೇಲಿಗಳನ್ನು ದಾಟಿ ಕಾಡಿನಿಂದ ಹೊರಬರುವ ಆನೆಗಳು ಜಮೀನುಗಳತ್ತ ಹೋಗುವುದನ್ನು ತಡೆಗಟ್ಟುವುದು ಹಾಗೂ ಜಮೀನುಗಳಲ್ಲಿ ಬೆಳೆನಾಶ ಮಾಡುವ ಆನೆಗಳನ್ನು ಕಾಡಿಗಟ್ಟುವುದು ಭಾರೀ ಸವಾಲಾಗುತ್ತಿದೆ. ಇದರಿಂದ ಸದ್ಯ ಲಭ್ಯವಿರುವ ಅರಣ್ಯ ಸಿಬ್ಬಂದಿ ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿ ಹಾಗೂ ಇಲಾಖಾ ವಾಹನಗಳನ್ನು ರಾತ್ರಿ ಗಸ್ತುಗಳಿಗೆ ಬಳಸುವಂತಾಗಿದೆ. ಆನೆಗಳ ದಾಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಿದ್ದರೂ ಅವುಗಳನ್ನು ದಾಟಿ ಹೊರಬರುತ್ತಿರುವುದು ಕಾಡಂಚಿನ ಜನರು ಹಾಗೂ ಆನೆಗಳ ನಡುವೆ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗುತ್ತಿದ್ದು ಜನ ಹಾಗೂ ಆನೆಗಳ ಜೀವಕ್ಕೂ ಮಾರಕವಾಗುತ್ತಿದೆ.

ಕಳೆದ ತಿಂಗಳು ಬಂಡೀಪುರದ ಹೆಡಿಯಾಲಕ್ಕೆ ಭೇಟಿ ನೀಡಿದ್ದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ರಾಜ್ಯದಲ್ಲಿ ಪ್ರತಿವರ್ಷ 50 ರಿಂದ 60 ಜನ ಕಾಡುಪ್ರಾಣಿಗಳ ದಾಳಿಯಿಂದ ಮೃತಪಡುತ್ತಿದ್ದಾರೆ. ಅತಿ ಹೆಚ್ಚು ಆನೆಗಳಿರುವ ಬಂಡೀಪುರ ಅರಣ್ಯದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಬೆಳೆ ನಾಶ ಹಾಗೂ ಜನರ ಪ್ರಾಣ ಹಾನಿ ತಪ್ಪಿಸಲು ಪ್ರತ್ಯೇಕ ಆನೆ ಕಾರ್ಯಪಡೆ ರಚಿಸಲಾಗುವುದು ಎಂದು ತಿಳಿಸಿದ್ದರು.

ಕಾರ್ಯಪಡೆಯಿಂದ ಏನು ಪ್ರಯೋಜನ? : ಕಾರ್ಯಪಡೆ ರಚಿಸಿದರೆ ಒಬ್ಬರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ವಲಯಾರಣ್ಯಾಧಿಕಾರಿ, ನಾಲ್ವರು ಉಪ ವಲಯಾರಣ್ಯಾಧಿಕಾರಿ. 8 ಗಾರ್ಡ್ ಹಾಗೂ 32 ಅರಣ್ಯ ವೀಕ್ಷಕರನ್ನು ನಿಯೋಜಿಸಲಾಗುತ್ತದೆ. ಮೂರರಿಂದ ನಾಲ್ಕು ಜೀಪುಗಳು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಈ ಸಿಬ್ಬಂದಿ ಹಾಗೂ ವಾಹನಗಳು ಆನೆಗಳು ಕಾಡಿನಿಂದ ಹೊರಬರುವ ಪ್ರದೇಶದಲ್ಲಿ ರಾತ್ರಿ ಗಸ್ತು ನಡೆಸುವ ಜತೆಗೆ ರೈತರಿಂದ ಕರೆ ಬಂದ ಕೂಡಲೇ ಸ್ಥಳಕ್ಕೆ ತೆರಳುವರು. ಇದರಿಂದ ಆನೆಗಳಿಂದಾಗುವ ಬೆಳೆ ನಾಶ ತಡೆಗಟ್ಟಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net