ಚಾಮರಾಜನಗರ : ಜಿಲ್ಲೆಯ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಡೆದಿರುವ ಜನತಾ ದರ್ಶನದಲ್ಲಿ ಕೇಳಿಬಂದ ದೂರುಗಳು ಸೂಕ್ತ ರೀತಿಯಲ್ಲಿ ವಿಲೇವಾರಿಯಾಗುತ್ತಿಲ್ಲ ಎಂದು ಜನತಾ ದರ್ಶನ ದೂರುದಾರರ ಒಕ್ಕೂಟದ ಸದಸ್ಯ ಶಂಕನಪುರ ಲಿಂಗರಾಜು ಆರೋಪಿಸಿದರು.
ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವರ ಅಧ್ಯೆಕ್ಷತೆಯಲ್ಲಿ ಈ ವರೆಗೆ ಎರಡು ಜನತಾ ದರ್ಶನ ನಡೆದಿದೆ. ಆದರೆ ದೂರುಗಳ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಜನತಾ ದರ್ಶನ ನೆಪಮಾತ್ರಕ್ಕೆ ಎಂಬುವಂತಾಗಿದೆ. ಯಾವ ದೂರುಗಳಿಗೂ ಸಮರ್ಪಕವಾದುತ್ತರವನ್ನು ನೀಡಿಲ್ಲ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ನಿಟ್ಟಿನಲ್ಲಿ ದೂರುಗಳ ತನಿಖೆಯ ಸಮಯದಲ್ಲಿ ದೂರುದಾರನ ಮಾಹಿತಿಯನ್ನು ಪರಿಗಣಿಸಬೇಕು. ತನಿಖೆಯ ವೇಳೆಯಲ್ಲಿ ಭಾವಚಿತ್ರ, ದೃಶ್ಯಗಳನ್ನು ಚಿತ್ರೀಕರಿಸಬೇಕು. ದೂರುಗಳ ಸಮಗ್ರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ದೂರುಗಳ ಸೂಕ್ತ ವಿಲೇವಾರಿಗೆ ಸಮಯವನ್ನು ನಿಗದಿಮಾಡಬೇಕು. ಇವುಗಳ ಸಮಗ್ರವಾಗಿ ಅನುಷ್ಠಾನಗೊಳ್ಳಬೇಕು ಆಗಿದ್ದಾಗ ಮಾತ್ರ ಜನತಾ ದರ್ಶನಕ್ಕೆ ಒಂದು ಅರ್ಥ ಬರುತ್ತದೆ. ಇಲ್ಲದಿದ್ದರೆ ಅದು ವಿಶ್ವಾಸ ಕಳೆದುಕೊಳ್ಳುತ್ತದೆ ಎಂದು ಹೇಳಿದರು. ಗೋಷ್ಠಿಯಲ್ಲಿ ನಿಜಧ್ವನಿ ಗೋವಿಂದರಾಜು, ನಾ.ಅಂಬರೀಷ್, ನಮ್ಮನೆ ಪ್ರಶಾಂತ್, ಗಿರೀಶ್, ನಾಗರಾಜು, ಮಹದೇವಸ್ವಾಮಿ ಹಾಜರಿದ್ದರು.