

ಕೊಳ್ಳೇಗಾಲ: ಮಾದಪ್ಪನ ನೆಲೆ ಬೀಡಾಗಿರುವ ಹನೂರು ಭಾಗವನ್ನು ಗಾಂಜಾ ಮಾರಾಟದ ಕೇಂದ್ರವನ್ನಾಗಿಸಲು ಒರಿಸ್ಸಾದಿಂದ ಮಾಲು ತರಲಾಗುತ್ತಿತ್ತು..!
ಕೊಳ್ಳೇಗಾಲದ ಪೊಲೀಸರು ಚಾಣಾಕ್ಷತನದಿಂದ ಪತ್ತೆ ಮಾಡಿರುವ 221 ಕೆ.ಜಿ ಗಾಂಜಾ ಸಾಗಣೆ ಪ್ರಕರಣದ ತನಿಖೆ ವೇಳೆ ಈ ಸತ್ಯ ಹೊರಬಿದ್ದಿದೆ. ತಾಲೂಕಿನ ನರೀಪುರ ರಸ್ತೆಯಲ್ಲಿ ಬುಧವಾರ ಈಚರ್ ಕ್ಯಾಂಟರ್‌ನಲ್ಲಿ 1.10 ಕೋಟಿ ರೂ.ಮೌಲ್ಯದ ಗಾಂಜಾ ಸಾಗಿಸುತ್ತಿದ್ದರು. ಇದನ್ನು ಪತ್ತೆ ಮಾಡಿದ ಪೊಲೀಸರು ಮಾಲು ಮತ್ತು ವಾಹನ ಸಮೇತ ಹನೂರು ತಾಲೂಕಿನ ಚಿಕ್ಕಲತ್ತೂರು ಗ್ರಾಮದ ಸೆಂದಿಲ್ ಕುಮಾರ್, ಬೆಂಗಳೂರು ಮೂಲದ ರವಿಕುಮಾರ್, ಹರಿಹರದ ಉಮಾಶಂಕರ್, ದಾವಣಗೆರೆಯ ವಿನಾಯಕಅನ್ನು ಬಂಧಿಸಿದರು. ಇವರನ್ನು ವಿಚಾರಣೆ ನಡೆಸಿದ ವೇಳೆ ಒರಿಸ್ಸಾದಿಂದ ಬೆಂಗಳೂರು-ಹನೂರು ಮತ್ತು ತಮಿಳುನಾಡಿಗೆ ಗಾಂಜಾ ಸರಬರಾಜು ಮಾಡಲು ಪ್ರಯತ್ನ ನಡೆದಿತ್ತು ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಅರಣ್ಯ ಪ್ರದೇಶಗಳಿಂದ ಕೂಡಿರುವ ಹನೂರು ತಾಲೂಕಿನಲ್ಲಿ ಜಮೀನುಗಳಲ್ಲಿ ಗಾಂಜಾ ಬೆಳೆದು ಸಿಕ್ಕಿ ಬೀಳುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ಇದರಿಂದಾಗಿ ರಾಜ್ಯದಲ್ಲಿ ಎಲ್ಲಿ ಗಾಂಜಾ ಸಿಗದೆ ಇದ್ದರೂ ಹನೂರು ಕಡೆ ಸಿಗುತ್ತದೆ ಎನ್ನುವ ವಿಷಯ ಹಬ್ಬಿದೆ. ಇದನ್ನೇ ಹುಡುಕಿಕೊಂಡು ಬರುವವರಿಗೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಮಾರಾಟ ಮಾಡಲು ಸೆಂದಿಲ್‌ಕುಮಾರ್ ಮತ್ತು ತಂಡ ಒರಿಸ್ಸಾದಿಂದ ಮಾಲು ಸಾಗಾಣಿಕೆ ಮಾಡಲು ಬಂದಿತ್ತು. ಈ ಭಾಗದ ಮಾರಾಟಗಾರರಿಗೆ ಸರಬರಾಜು ಮಾಡುವುದು ಮುಖ್ಯ ಉದ್ದೇಶವಾಗಿತ್ತು. ನಂತರ ತಮಿಳುನಾಡಿಗೆ ತಲುಪಿಸುವುದಾಗಿತ್ತು. ಆದರೆ ಪೊಲೀಸರು ಸೆಂದಿಲ್‌ಕುಮಾರ್ ಮೇಲೆ ನಿಗಾ ಇಟ್ಟು ಪ್ರಕರಣವನ್ನು ಪತ್ತೆ ಮಾಡಿದ್ದಾರೆ. ಇನ್ನು ಸ್ಥಳೀಯವಾಗಿ ಮಾರಾಟ ಮಾಡುವವರನ್ನು ಪತ್ತೆ ಮಾಡಬೇಕಿದ್ದು, ಈ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳ ಜಾಲ ಸಿಕ್ಕಿ ಬೀಳುವ ಸಾಧ್ಯತೆ ಇದೆ.
ಸೆಂದಿಲ್ ಮೇಲಿತ್ತು ಕಣ್ಣು:
ಆರೋಪಿ ಸೆಂದಿಲ್‌ಕುಮಾರ್ ಈ ಹಿಂದೆ ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಗುಮಾನಿ ಮೇಲೆ ಈತನ ಮೇಲೊಂದು ಕಣ್ಣಿಡಲಾಗಿತ್ತು. ಇವರು ಹನೂರಿನ ಕೆಲವು ಭಾಗಗಳಿಗೆ ಗಾಂಜಾವನ್ನು ಸರಬರಾಜು ಮಾಡಬೇಕೆಂದಿದ್ದ. ಇಲ್ಲಿನ ಮಾರಾಟಗಾರರಿಗೆ ಕೊಟ್ಟು ಗಾಂಜಾ ಮಾರಾಟ ಮಾಡಿಸಲು ಮಾಲು ತಂದಿದ್ದ. ಇಲ್ಲಿಂದ ತಮಿಳುನಾಡಿಗೂ ಸಾಗಾಣಿಕೆ ಮಾಡಬೇಕೆಂದುಕೊಂಡಿದ್ದ. ಈ ಪ್ರಕರಣ ಬೇದಿಸಲು ಪೊಲೀಸರು 5 ತಿಂಗಳಿನಿಂದ ಕಸರತ್ತು ಮಾಡಿದ್ದರು. ಕಳೆದ ಎರಡ್ಮೂರು ದಿನದಿಂದ ಕಾರ್ಯಾಚರಣೆ ಚುರುಕುಗೊಳಿಸಿ ಚಾಣಾಕ್ಷತನದಿಂದ ಸೆಂದಿಲ್ ಕುಮಾರ್ ಮತ್ತು ತಂಡವನ್ನು ಸೆರೆಹಿಡಿದಿದ್ದಾರೆ.
ವಾರದಲ್ಲಿ 300 ಕೆ.ಜಿ ಗಾಂಜಾ:
221 ಕೆಜಿ ಗಾಂಜಾ ಸಾಗಣೆ ಆರೋಪಿಗಳ ವಿಚಾರಣೆ ವೇಳೆ ಆಶ್ವರ್ಯ ರೀತಿ ಮಾಹಿತಿಯೊಂದು ಪೊಲೀಸರಿಗೆ ದೊರೆತಿದೆ.
221 ಗಾಂಜಾ ಸಾಗಾಣಿಕೆ ಪೊಲೀಸರ ಕೈಗೆ ಸಿಗದೆ ಯಶಸ್ವಿಯಾದೆ ಪ್ರತಿ ವಾರ 300 ಕೆ.ಜಿ ಸಾಗಾಣಿಕೆ ಮಾಡಲು ಯೋಜನೆ ರೂಪಿಸಿದ್ದರಂತೆ. ಹನೂರು ಮತ್ತು ಕೊಳ್ಳೇಗಾಲ ಭಾಗದಲ್ಲಿ ಮಲೆ ಮಹದೇಶ್ವರರ ಪರಂಪರೆ ಹಾಸುಹೊಕ್ಕಾಗಿ ಉಳಿದುಕೊಂಡಿದೆ. ಲಕ್ಷಾಂತರ ಭಕ್ತರು ಯಾತ್ರೆ ಬರುವ ಊರಿನಲ್ಲಿ ಗಾಂಜಾ ಘಾಟು ಹೆಚ್ಚಾಗಿದ್ದರೆ ಜಿಲ್ಲೆಯ ಕೀರ್ತಿಗೆ ಕಳಂಕ. ಅಲ್ಲದೇ ಗಾಂಜಾ ಮಾರಾಟ ಕೇಂದ್ರವೆಂಬ ಅಪಖ್ಯಾತಿಯೂ ಬರುತ್ತಿತ್ತು. ಇದಕ್ಕೆ ಪೊಲೀಸ್ ಇಲಾಖೆ ಸಮಯ ಪ್ರಜ್ಞೆಯಿಂದ ಇದಕ್ಕೆ ಬ್ರೇಕ್ ಹಾಕಿದೆ.
ಗಾಂಜಾ ದೂರು ಹೆಚ್ಚಿತ್ತು:
ಇತ್ತೀಚೆಗೆ ಕೊಳ್ಳೇಗಾಲದಲ್ಲಿ ನಡೆದ ಎಸ್ಸಿ-ಎಸ್ಟಿ ಸಭೆ ಹಾಗೂ ಡಿವೈಎಸ್ಪಿ ಧರ್ಮೇಂದ್ರ ಅವರು ಕರೆದಿದ್ದ ನಗರಸಭಾ ಸದಸ್ಯರ ಸಭೆಯಲ್ಲಿ ಗಾಂಜಾ ಬಳಕೆ ಸಕ್ರಿಯವಾಗಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನಲೆ ತೀವ್ರ ಕಾರ್ಯಾಚರಣೆಗಿಳಿದ ಡಿವೈಎಸ್ಪಿ ಎ.ಧಮೇಂದ್ರ ತಂಡ ದೊಡ್ಡ ಪ್ರಮಾಣದ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಗಾಂಜಾ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕು ಗೊಳಿಸಿದ್ದೇವೆ. ಈ ಪ್ರಕರಣಕ್ಕೆ ಪೂರಕವಾದ ಕೆಲವು ದುಷ್ಕರ್ಮಿಗಳಿದ್ದಾರೆ. ಗಾಂಜಾ ಮಾರಾಟ ಜಾಲವನ್ನು ಬೇರೂ ಸಹಿತ ತೆಗೆಯಲು ಕಾರ್ಯಾ ಚರಣೆ ನಡೆಸುತ್ತಿದ್ದೇವೆ.ಎಂ.ಧಮೇಂದ್ರ, ಡಿವೈಎಸ್ಪಿ