ಬಿ.ರಾಚಯ್ಯ ಅವರ 24 ನೇ ಸಂಸ್ಮರಣೆ

15rajesh2(B RAchayya)
Published on

ಚಾಮರಾಜನಗರ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಸಭಾಂಗಣದಲ್ಲಿ ಶ್ರೀಗಂಧ ಕನ್ನಡಯುವ ವೇದಿಕೆ ವತಿಯಿಂದ ಮಾಜಿಸಚಿವ, ರಾಜ್ಯಪಾಲ ದಿ.ಬಿ.ರಾಚಯ್ಯ ಅವರ 24 ನೇ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.

ಬರಹಗಾರ ಲಕ್ಷ್ಮಿನರಸಿಂಹ ಮಾತನಾಡಿ, ಬಿ.ರಾಚಯ್ಯ ಅವರು ರಾಜ್ಯದ ಕೃಷಿ ಮತ್ತು ಅರಣ್ಯ ಸಚಿವರಾಗಿದ್ದ ವೇಳೆ ಚಾಮರಾಜನಗರ ಜಿಲ್ಲೆಗೆ ವಿಶೇಷವಾದ ಕೊಡುಗೆ ನೀಡಿದ್ದಾರೆ. ಚಾಮರಾಜನಗರ ಸಮೀಪದ ಚಿಕ್ಕಹೊಳೆ, ಸುವರ್ಣಾವತಿ ಜಲಾಶಯಗಳ ನಿರ್ಮಾಣ ಮಾಡುವ ಮೂಲಕ ಚಾಮರಾಜನಗರದ ಜನತೆಗೆ ಕುಡಿಯುವ ನೀರಿನ ಭವಣೆ ನೀಗಿಸಿದರು. ಭೂರಹಿತರಿಗೆ ಸಾಗುವಳಿ ಜಮೀನು ಮಂಜೂರು, ಶಿಕ್ಷಣವಂಚಿತರಿಗೆ ಶಾಲೆಗಳನ್ನು ತೆರೆಯುವ ಕೆಲಸ ಮಾಡಿದ್ದಾರೆ. ಅವರನ್ನು ಚಾಮರಾಜನಗರ ಜನತೆ ಸದಾಸ್ಮರಿಸಬೇಕಿದೆ ಎಂದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ,ಬಿ.ರಾಚಯ್ಯ ಅವರು ಚಾಮರಾಜನಗರಜಿಲ್ಲೆಗೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಸ್ಮರಿಸುವ ಮೂಲಕ ನಮ್ಮ ಸಂಘಟನೆಯಿಂದ ದೊಡ್ಡ ಕಾರ್ಯಕ್ರಮ ಆಯೋಜಿಸಿ ಅವರಿಗೆ ಬೆಳ್ಳಿಕಿರೀಟ ತೊಡಿಸಿ, ಸನ್ಮಾನಿಸಿ ಅಭಿನಂದಿಸಿದ್ದೇವೆ ಎಂದರು.

ಶ್ರೀಗಂಧ ಕನ್ನಡಯುವ ವೇದಿಕೆ ಅಧ್ಯಕ್ಷ ರವಿಚಂದ್ರಪ್ರಸಾದ್ ಮಾತನಾಡಿ, ನಗರದ ಪ್ರಮುಖ ಬಿ.ರಾಚಯ್ಯ ಜೋಡಿರಸ್ತೆಗೆ ದೊಡ್ಡ ಕಮಾನು ನಾಮಫಲಕವನ್ನು ಸಂಬಂಧಪಟ್ಟಇಲಾಖಾಧಿಕಾರಿಗಳು ಅಳವಡಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಪಣ್ಯದಹುಂಡಿರಾಜು, ಮಹೇಶ್‌ಗೌಡ, ಕಸಾಪ ಸದಸ್ಯ ಎಲ್.ಶಿವಲಿಂಗಮೂರ್ತಿ, ಕಿಶೋರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net