ಪಾಳುಬಿದ್ದ ಕ್ಲಸ್ಟರ್ ಸಂಪನ್ಮೂಲ ಕೇಂದ್ರ

15 HANUR 1
Published on

ಹನೂರು : ಪಟ್ಟಣದ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಶಾಲೆಯ ಆವರಣದಲ್ಲಿರುವ ಬಳಕೆಗೆ ಬಾರದ ಕ್ಲಸ್ಟರ್ ಸಂಪನ್ಮೂಲ ಕೇಂದ್ರ ಧೂಳು ಹಿಡಿಯುತ್ತಿದ್ದು, ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ತಾಲೂಕು ಕೇಂದ್ರವಾದ ಹನೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇದ್ದು, 10 ವರ್ಷದ ಹಿಂದೆ ಶಿಕ್ಷಕರ ಸಭೆ, ತರಬೇತಿ ಕಾರ್ಯಾಗಾರ ಹಾಗೂ ಇನ್ನಿತರ ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಶತಮಾನವನ್ನು ಪೂರೈಸಿದ ಸರ್ಕಾರಿ ಶಾಲೆಯ ಆವರಣದಲ್ಲಿ ಕ್ಲಸ್ಟರ್ ಸಂಪನ್ಮೂಲ ಕೇಂದ್ರವನ್ನು ತೆರೆಯಲಾಗಿತ್ತು. ಆದರೆ ಕಟ್ಟಡವು ಕಿರಿದಾದ ಹಿನ್ನೆಲೆಯಲ್ಲಿ ಕೆಲ ವರ್ಷದ ಬಳಿಕ ಶಾಲೆಯ ಆವರಣದಲ್ಲೇ ಇರುವ ಮತ್ತೊಂದು ಕಟ್ಟಡಕ್ಕೆ ಈ ಕೇಂದ್ರವನ್ನು ವರ್ಗಾಯಿಸಲಾಗಿತ್ತು. ಆದರೆ ಇಲಾಖೆಯ ಅಧಿಕಾರಿಗಳು ಹಳೇ ಕಟ್ಟಡವನ್ನು ಬೇರೆ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳದ ಪರಿಣಾಮ ಅನಾಥವಾಗಿದೆ. ಇದು ಈತ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದ್ದು, ಅನೈರ್ಮಲ್ಯದಿಂದ ಕೂಡಿದೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಈ ಶಾಲೆಯ ಪ್ರವೇಶ ದ್ವಾರದ ಪಕ್ಕದಲ್ಲೇ ಈ ಕೇಂದ್ರವಿದ್ದು, ಬಾಗಿಲು ಹಾಕದ ಸ್ಥಿತಿಯಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಈ ಕಟ್ಟಡದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದ ಪರಿಣಾಮ ಸಂಜೆಯಾಗುತ್ತಿದ್ದಂತೆ ಇಲ್ಲವೇ ಶಾಲಾ ಅವಧಿ ಮುಗಿದ ಬಳಿಕ ಕೆಲವರು ಕುಡುಕರ ಅಡ್ಡೆಯನ್ನಾಗಿಸಿಕೊಳ್ಳುತ್ತಿರುವುದು ಒಂದೆಡೆಯಾದರೆ, ಇನ್ನು ಕೆಲವರು ಲೈಂಗಿಕ ಕಾರ್ಯಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಇದರಿಂದ ಶಾಲಾ ವಾತಾವರಣ ಹದಗೆಡುತ್ತಿದ್ದು, ಮುಗ್ಧ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ.
ಅನೈರ್ಮಲ್ಯ ನಿರ್ಮಾಣ: ಸಂಜೆಯಾಗುತ್ತಿದ್ದಂತೆಯೇ ಅನೈತಿಕ ಚಟುವಟಿಕೆ ತಾಣವಾಗುತ್ತಿರುವ ಈ ಕೇಂದ್ರದಲ್ಲಿ ಬೀಡಿ, ಸಿಗರೇಟು ತುಂಡುಗಳು ಯಥೇಚ್ಛವಾಗಿವೆ. ಕೆಲವರು ಇಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಈ ಕೇಂದ್ರದಲ್ಲಿ ದುರ್ವಾಸನೆಯೊಂದಿಗೆ ಅನೈರ್ಮಲ್ಯ ಮನೆ ಮಾಡಿದೆ. ಆದ್ದರಿಂದ ಮಾದರಿ ಶಾಲೆ ಹಾಗೂ ಸಮೂಹ ಸಂಪನ್ಮೂಲ ಕಚೇರಿ ಆವರಣದಲ್ಲೇ ಇರುವ ಕೇಂದ್ರದ ಸ್ಥಿತಿ ಹೀಗಾದರೆ ಇನ್ನು ಬೇರೆ ಕೇಂದ್ರಗಳ ಸ್ಥಿತಿ ಹೇಗಿರಬೇಕು ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಕ್ರಮವಹಿಸದ ಅಧಿಕಾರಿಗಳು: ಕೇಂದ್ರದ ಶಾಲಾ ಆವರಣವು ವಿಶಾಲವಾಗಿರುವುದರಿಂದ ತಾಲೂಕು ಆಡಳಿತದಿಂದ ಕೆಲವು ಮಹಾನ್ ನಾಯಕರ ಜಯಂತಿಗಳನ್ನು ಇಲ್ಲಿಯೇ ಆಯೋಜಿಸಲಾಗುತ್ತದೆ. ಜತೆಗೆ ಸಮೂಹ ಸಂಪನ್ಮೂಲ ಕೇಂದ್ರವಿರುವುದರಿಂದ ಸಭೆ, ಸಮಾರಂಭ ಹಾಗೂ ತರಬೇತಿ ಕಾರ್ಯಾಗಾರಗಳಿಗೆ ಶೈಕ್ಷಣಿಕ ವಲಯದ ಶಿಕ್ಷಕರು ಆಗಮಿಸುತ್ತಾರೆ. ಆದರೆ ಈ ಕೇಂದ್ರ ಅನೈತಿಕ ಚಟುವಟಿಕೆ ತಾಣವಾಗಿದ್ದರೂ ಯಾವುದೇ ಕ್ರಮ ವಹಿಸದಿರುವುದು ವಿಪರ್ಯಾಸ.

ಹೀಗಾಗಲೂ ಕಾರಣವೇನು?: ಈ ಹಿಂದೆ ಶಾಲೆಯ ಪ್ರವೇಶ ದ್ವಾರದಲ್ಲಿನ ಗೇಟ್‌ಗೆ ಶಾಲಾ ಅವಧಿ ಮುಗಿದ ಬಳಿಕ ಬೀಗ ಹಾಕಲಾಗುತ್ತಿತ್ತು. ಇದರಿಂದ ಯಾರು ಒಳ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ವರ್ಷದ ಹಿಂದೆ ಕೆ-ಶಿಪ್ ಯೋಜನೆಯಡಿ ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಸಂಬಂಧ ಶಾಲಾ ಕಾಂಪೌಂಡ್ ತೆರೆವುಗೊಳಿಸಿ ಹೊಸ ಕಾಂಪೌಂಡ್ ನಿರ್ಮಿಸಲಾಗಿದ್ದು, ಮುಖ್ಯ ಗೇಟ್ ಜತೆಗೆ ಚಿಕ್ಕದಾದ ಗೇಟ್ ಸಹ ಅಳವಡಿಸಲಾಗಿದೆ. ಮುಖ್ಯ ಗೇಟ್‌ಗೆ ಶಾಲಾ ಅವಧಿ ಮುಗಿದ ಬಳಿಕ ಬೀಗ ಹಾಕಲಾಗುತ್ತದೆ. ಆದರೆ ಅವೈಜ್ಞಾನಿಕವಾಗಿರುವ ಚಿಕ್ಕದಾದ ಗೇಟ್‌ಗೆ ಬೀಗ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಶಾಲಾ ಆವರಣವನ್ನು ಪ್ರವೇಶಿಸಬಹುದಾಗಿದೆ. ಹಾಗಾಗಿ ಚಿಕ್ಕದಾದ ಗೇಟ್‌ಗೆ ಬೀಗ ಹಾಕದಿರುವುದೇ ಪ್ರಮುಖ ಕಾರಣ ಎಂದು ಹೇಳಬಹುದು.
ಬಳಕೆಗೆ ಒತ್ತಾಯ: ಕಟ್ಟಡದ ಗೋಡೆಗಳು ಸುಸ್ಥಿತಿಯಲ್ಲಿದ್ದು, ಛಾವಣಿಯ ಕೆಲ ಕಡೆ ಮಾತ್ರ ಶಿಥಿಲಗೊಂಡಿದೆ. ಆದ್ದರಿಂದ ಛಾವಣಿಯನ್ನು ರಿಪೇರಿ ಮಾಡಿ ಬಣ್ಣ ಬಳಿದರೆ ಉತ್ತಮ ಕಟ್ಟಡವಾಗಲಿದೆ. ಇದನ್ನು ಇತರ ಕೆಲಸ ಕಾರ್ಯಗಳಿಗೆ ಇಲ್ಲವೇ ವಸ್ತುಗಳ ದಾಸ್ತಾನುಗಳಿಗೆ ಬಳಕೆ ಮಾಡಿಕೊಳ್ಳಬಹುದು. ಇದರಿಂದ ಅನೈತಿಕ ಕೇಂದ್ರವಾಗುವುದು ತಪ್ಪುತ್ತದೆ. ಸರ್ಕಾರಿ ಕಟ್ಟಡವನ್ನು ಸದ್ಬಳಕೆ ಮಾಡಿಕೊಂಡಂತೆಯೂ ಆಗುತ್ತದೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಶಿಕ್ಷಣ ಇಲಾಖೆ ಕೇಂದ್ರವನ್ನು ಬಳಕೆ ಮಾಡಿಕೊಳ್ಳದ ಕಾರಣ ಕೆಲವರು ಅನೈತಿಕ ಚಟುವಟಿಕೆಗೆ ಉಪಯೋಗಿಸಿಕೊಳ್ಳುತ್ತಿದ್ದು, ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಶಾಲಾ ಆವರಣ ಹದಗೆಡುತ್ತಿದೆ. ಸಂಬಂಧಪಟ್ಟವರು ಇದಕ್ಕೆ ಕಡಿವಾಣ ಹಾಕಬೇಕು. ಜತೆಗೆ ಕಟ್ಟಡವನ್ನು ರಿಪೇರಿ ಮಾಡಿ ಗ್ರಂಥಾಲಯಕ್ಕೆ ನೀಡುವುದರಿಂದ ಅನುಕೂಲವಾಗಲಿದೆ.ಸುದೇಶ್, ಪಪಂ ಸದಸ್ಯ, ಹನೂರು ಕ್ಲಸ್ಟರ್ ಸಂಪನ್ಮೂಲ ಕೇಂದ್ರ ಹಳೆಯದಾಗಿದ್ದು, ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡುವುದರ ಜತೆಗೆ ಕೇಂದ್ರಕ್ಕೆ ಬೀಗ ಹಾಕಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು.ಶಿವರಾಜು, ಬಿಇಒ, ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net