ಗುಂಡ್ಲುಪೇಟೆ: ಕಾರ್ಯಕರ್ತರು ಕೇಂದ್ರ ಸರ್ಕಾರದ ಜನಪರ ಹಾಗೂ ಪ್ರಗತಿಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ನೂತನ ಮಂಡಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರದ ಯೋಜನೆಗಳು ಅಸಮರ್ಪಕವಾಗಿವೆ. ಬಹಳಷ್ಟು ಜನರಿಗೆ ಇನ್ನೂ ವಿವಿಧ ಯೋಜನೆಗಳ ಲಾಭ ದೊರಕಿಲ್ಲ. ಆದರೆ ನರೇಂದ್ರ ಮೋದಿ ಬ್ಯಾಂಕುಗಳಲ್ಲಿ ಬಡ ಹಾಗೂ ಸಾಮಾನ್ಯರಿಗೆ ಉಪಯೋಗವಾಗುವ ಕಾರ್ಯಕ್ರಮ ಕೈಗೊಂಡಿದ್ದಾರೆ. ಬಡವರೂ ಉಚಿತ ಖಾತೆ ತೆರೆಯುವಂತೆ ಮಾಡಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಯ ಲಾಭ ದೊರಕಿಸಿದ್ದಾರೆ ಎಂದರು.
ಕೇವಲ ಶ್ರೀಮಂತರ ಸ್ವತ್ತಾಗಿದ್ದ ಅಡುಗೆ ಅನಿಲ ಕಡುಬಡವರಿಗೂ ದೊರಕಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಲಜೀವನ್ ಮಿಷನ್ ಯೋಜನೆಯಲ್ಲಿ ಎಲ್ಲ ಮನೆಗಳಿಗೂ ನೀರಿನ ಸಂಪರ್ಕ ಕೊಡಿಸಿದ್ದಾರೆ. ರೈತರು ಹಾಗೂ ಮಹಿಳೆಯರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಈ ಎಲ್ಲ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲು ಗ್ರಾಮ ಮಟ್ಟಗಳಲ್ಲಿ ಸಭೆ ನಡೆಸಬೇಕು ಎಂದು ಹೇಳಿದರು. ನಿರ್ಗಮಿತ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ನಿರ್ಗಮಿತ ಮಂಡಲಾಧ್ಯಕ್ಷ ಜಗದೀಶ, ಜಿಲ್ಲಾ ಉಪಾಧ್ಯಕ್ಷ ಹಿರೀಕಾಟಿ ಸೋಮಶೇಖರ್, ಬಗರ್ ಹುಕುಂ ಸಮಿತಿಯ ಮಾಜಿ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎನ್.ಮಲ್ಲೇಶ್, ಎಸ್.ಎಂ. ಮಲ್ಲಿಕಾರ್ಜುನ, ಹೊರೆಯಾಲ ಕೃಷ್ಣ ಇತರರು ಇದ್ದರು.