

ಚಾಮರಾಜನಗರ: ಪ್ರತಿಯೊಬ್ಬರಿಗೂ ಗ್ರಾಹಕರ ಹಕ್ಕುಗಳ ಅರಿವು ಅಗತ್ಯವಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಂ.ವಿ. ಭಾರತಿ ಹೇಳಿದರು.
ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಗಂಧ ಮಹಿಳಾ ಅಭಿವೃದ್ಧಿ ಸಂಘ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಹಕರ ಜಾಗೃತಿ, ಹಕ್ಕುಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರು ವಸ್ತುಗಳನ್ನು ಖರೀದಿಸಿದಾಗ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು. ಇದರಿಂದ ವಸ್ತುಗಳ ಖರೀದಿಯಲ್ಲಿ ಮೋಸವಾಗಿದ್ದರೆ ಸೂಕ್ತ ದಾಖಲೆ ಒದಗಿಸಿ ನ್ಯಾಯ ಪಡೆಯಬಹುದು. ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಸಿಗುವ ನ್ಯಾಯ ತೃಪ್ತಿಕರವಾಗದಿದ್ದರೆ ರಾಜ್ಯ ಹಾಗೂ ರಾಷ್ಟ್ರೀಯ ಆಯೋಗಗಳ ಮೊರೆ ಹೋಗಬಹುದು ಎಂದರು.
ಆಹಾರ ಇಲಾಖೆಯ ಶಿರಸ್ತೇದಾರ್ ಮಹೇಶ್ ಮಾತನಾಡಿ, ಗ್ರಾಹಕರು ವಸ್ತುಗಳನ್ನು ಖರೀದಿಸುವ ಮುನ್ನ ಕಂಪನಿ, ಅವಧಿ ಮುಗಿದಿರುವ ದಿನಾಂಕ ಸೇರಿದಂತೆ ಇತರ ಅಂಶಗಳನ್ನು ಗಮನಿಸಬೇಕು. ಬಿಲ್‌ಗಳಿದ್ದರೆ ಪ್ರಕರಣ ದಾಖಲಿಸಬಹುದು ಎಂದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಕೆ.ಎಸ್.ರಾಜು, ಕಾನೂನು ಮಾಪನಶಾಸ್ತ್ರ ಇಲಾಖೆಯ ನಿಯಂತ್ರಕ ಭಾಸ್ಕರ್, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯೋಜಕಿ ಶಿವರಾಜಮ್ಮ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಯ್ಯ, ಶ್ರೀಗಂಧ ಮಹಿಳಾ ಸಂಘದ ಮಮತಾ, ಎಸ್‌ಡಿಎಂಸಿ ಅಧ್ಯಕ್ಷೆ ರಾಜೇಶ್ವರಿ ಇತರರು ಉಪಸ್ಥಿತರಿದ್ದರು.