

ಚಾಮರಾಜನಗರ: ಚಾಮರಾಜನಗರ-ಗುಂಡ್ಲುಪೇಟೆ ರಸ್ತೆ ವಿಸ್ತರಣೆಗೆ ಒತ್ತಾಯಿಸಿ ಗುಂಡ್ಲುಪೇಟೆಯಿಂದ ಪಾದಯಾತ್ರೆ ನಡೆಸಿದ್ದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಚಾಮರಾಜನಗರಕ್ಕೆ ಆಗಮಿಸಿ ಜಿಲ್ಲಾಡಳಿತ ಭವನದ ಮುಂಭಾಗ ಧರಣಿ ನಡೆಸಿತು.
ಈ ರಸ್ತೆ ವಿಸ್ತರಣೆ ಮಾಡಬೇಕೆಂಬುದು ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಅವರ ಕನಸಾಗಿತ್ತು. ಆದರೆ ಇದನ್ನು ಇನ್ನೂ ಸಹ ವಿಸ್ತರಣೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ಈ ರಸ್ತೆಯಲ್ಲಿ ಭಾರಿ ವಾಹನಗಳು ಅಧಿಕ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇದ್ದು, ಇದನ್ನು ತಡೆಯಲು ಕ್ರಮ ಕೈಗೊಂಡಿಲ್ಲ. ಕೇರಳ ಮತ್ತು ತಮಿಳುನಾಡಿಗೆ ಮಾರ್ಗವಾಗಿರುವ ಈ ರಸ್ತೆಯನ್ನು ತುರ್ತಾಗಿ ವಿಸ್ತರಣೆ ಮಾಡಬೇಕಿದೆ ಎಂದು ಆಗ್ರಹಿಸಿದರು.
ಹಾಲಿ ರಸ್ತೆಯಲ್ಲಿ ಹಳ್ಳಕೊಳ್ಳಗಳು ಇವೆ. ಪ್ರತಿನಿತ್ಯ ಸಂಚಾರ ಮಾಡುವ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಕಾರಣಕ್ಕೆ ರಸ್ತೆ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಗುಂಡ್ಲುಪೇಟೆಯಿಂದ ಚಾಮರಾಜನಗರದವರೆಗೂ ಪಾದಯಾತ್ರೆ ನಡೆಸಿದೆ. ಜಿಲ್ಲಾಡಳಿತ ಕೂಡಲೇ ರಾಜ್ಯ ಸರ್ಕಾರದ ಗಮನಕ್ಕೆ ತಂದು ತುರ್ತಾಗಿ ರಸ್ತೆ ವಿಸ್ತರಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಂಬರೀಷ್, ನಿಂಗರಾಜು, ಗವಿಸ್ವಾಮಿ, ಸಿದ್ದಾರ್ಥ್, ನಮ್ಮನೆ ಪ್ರಶಾಂತ್, ಅಸದ್ ಉಲ್ಲಾ ಷರೀಷ್ ಇತರರು ಪಾಲ್ಗೊಂಡಿದ್ದರು.