ಚಾಮರಾಜನಗರ: ಕುಷ್ಠರೋಗ ಚಿಹ್ನೆಗಳು ಕಂಡುಬಂದಲ್ಲಿ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಲು ಸಲಹೆ ನೀಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ಲಭ್ಯವಿದ್ದು, ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಅರಿವು ಮೂಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜ.30ರಂದು ಕುಷ್ಠರೋಗ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ‘ಕುಷ್ಠರೋಗದ ವಿರುದ್ಧ ಹೋರಾಡಿ ಇದರ ಕಳಂಕವನ್ನು ಕೊನೆಗೊಳಿಸಿ ಘನತೆಯನ್ನು ಎತ್ತಿ ಹಿಡಿಯಿರಿ’ ಎಂಬುದು ಈ ಸಾಲಿನ ಘೋಷವಾಕ್ಯವಾಗಿದೆ. ಆದ್ದರಿಂದ ಕುಷ್ಠರೋಗ ನಿರ್ಮೂಲನೆ ಜಾಗೃತಿ ಅಭಿಯಾನ ಯಶಸ್ವಿಗೊಳಿಸಬೇಕು. ಫೆಬ್ರವರಿ 13ರವರೆಗೆ ಅಭಿಯಾನ ನಡೆಯಲಿದೆ ಎಂದರು.
ಕುಷ್ಠರೋಗದ ಹೊಸ ಪ್ರಕರಣಗಳು ಮತ್ತು ಚಿಕಿತ್ಸೆ ಪೂರ್ಣಗೊಳಿಸಿದ ಪ್ರಕರಣಗಳ ವಿವರವನ್ನು ಪರಿಶೀಲಿಸಿದ ಅವರು, ಕುಷ್ಠರೋಗ ಬಗೆಗಿನ ತಪ್ಪು ಕಲ್ಪನೆಗಳನ್ನು ಜನರಲ್ಲಿ ಹೋಗಲಾಡಿಸಬೇಕಿದೆ. ಕುಷ್ಠರೋಗ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಆದರೆ ಆರಂಭದಲ್ಲಿಯೇ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಇದರಿಂದ ಮುಂದೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಬಹುದು. ಅಭಿಯಾನದ ವೇಳೆ ಇಂತಹ ಮಹತ್ವದ ಮಾಹಿತಿಗಳನ್ನು ನೀಡಬೇಕೆಂದು ತಿಳಿಸಿದರು. ಕುಷ್ಠರೋಗದ ವಿರುದ್ಧ ಜಾಗೃತಿ ಮೂಡಿಸುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಕುಷ್ಠರೋಗದ ವಿರುದ್ಧ ಹೋರಾಡುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಶೇಖರ್, ಆರ್.ಸಿ.ಎಚ್. ಅಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ರವಿಕುಮಾರ್, ತಾಲೂಕು ಆರೋಗ್ಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಇತರ ಅಧಿಕಾರಿಗಳು ಇದ್ದರು.